ಪಿ ಎಫ್ ಐ ಮೇಲಿನ ದಾಳಿ, ಬಂಧನದ ಸ್ವರೂಪ ತೀವ್ರ ಕಳವಳಕಾರಿ : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

ಉಡುಪಿ, ಸೆ.೨೩ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿಗಳ ಮೇಲೆ ದೇಶಾದ್ಯಂತ ನಡೆದಿರುವ ಎನ್ ಐ ಎ ಹಾಗು ಇ ಡಿ ದಾಳಿ ಹಾಗೂ ಆ ಸಂಘಟನೆಯ ಪ್ರಮುಖ ನಾಯಕರನ್ನು ಬಂಧಿಸಿರುವ ಕಾರ್ಯಾಚರಣೆಯ ಸ್ವರೂಪ ತೀವ್ರ ಕಳವಳಕಾರಿಯಾಗಿದೆ ಹಾಗೂ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿ ಹಾಕಿದೆ. ಇಷ್ಟೊಂದು ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಹಲವು ನಾಯಕರನ್ನು ವಶಕ್ಕೆ ಪಡೆಯಲು ಮಾಡಲಾಗಿರುವ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿವೆಯೇ ಅಥವಾ ಇದು ಕೇವಲ ಕಿರುಕುಳ ನೀಡುವ ಕ್ರಮವೇ ಎಂಬ ಅನುಮಾನ ಮೂಡುತ್ತಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯವೈಖರಿ ಸಂಪೂರ್ಣ ಪಕ್ಷಪಾತಿ ದೋರಣೆ ಹಾಗೂ ರಾಜಕೀಯ ಪ್ರೇರಿತವಾಗಿರುವುದು ಎದ್ದು ಕಾಣುತ್ತಿದೆ. ವಿಪಕ್ಷಗಳ ನಾಯಕರು, ಕೇಂದ್ರ ಸರಕಾರದ ಟೀಕಾಕಾರರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು, ಎನ್ ಜಿ ಒ ಗಳನ್ನು ಇ ಡಿ, ಐಟಿ , ಸಿಬಿಐ, ಎನ್ ಐ ಎ ಯಂತಹ ಸಂಸ್ಥೆಗಳ ಮೂಲಕ ಹಣಿಯಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿರುವಾಗಲೇ ಪಿ ಎಫ್ ಐ ಮೇಲೆ ಬಹಳ ದೊಡ್ಡ ಪ್ರಮಾಣದಲ್ಲಿ ದೇಶಾದ್ಯಂತ ನಡೆದಿರುವ ಎನ್ ಐ ಎ ಹಾಗೂ ಇಡಿ ದಾಳಿ ಸಹಜವಾಗಿ ಹಲವು ಕಳವಳಕಾರಿ ಪ್ರಶ್ನೆಗಳನ್ನು ಎತ್ತಿ ಹಾಕಿದೆ. ಸರಕಾರದ ಸಾಧನೆ ಕುರಿತ ಪ್ರಶ್ನೆಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಹಾಗು ಕಾರ್ಯಕರ್ತರ ಅಸಮಾಧಾನವನ್ನು ತಣಿಸಲು ಇಂತಹದೊಂದು ಕಾರ್ಯಾಚರಣೆ ನಡೆಯುತ್ತಿದೆಯೇ ಎಂಬ ಗಂಭೀರ ಸಂಶಯ ಜನರನ್ನು ಕಾಡುತ್ತಿದೆ ಎಂದು ಒಕ್ಕೂಟ ಹೇಳಿದೆ.

ಪಿ ಎಫ್ ಐ ಮೇಲೆ ಕೇಂದ್ರ ಸರಕಾರ, ಬಿಜೆಪಿ, ಸಂಘ ಪರಿವಾರ ಮಾಡುತ್ತಿರುವ ಧಾಟಿಯಂತಹ ಹಾಗೂ ಅದಕ್ಕಿಂತ ಗಂಭೀರ ಆರೋಪಗಳು ಹಲವು ಬಲಪಂಥೀಯ ಸಂಘಟನೆಗಳ ಮೇಲೂ ಇದೆ. ರಾಷ್ಟ್ರಪಿತ ಗಾಂಧೀಜಿ ಹಂತಕರನ್ನೇ ವೈಭವೀಕರಿಸುವ, ಅಲ್ಪಸಂಖ್ಯಾತರ ನರಮೇಧ ನಡೆಸಲು ಕರೆ ಕೊಡುವ, ಪೋಲೀಸರ ಮೇಲೆಯೇ ಹಲ್ಲೆ, ದಾಳಿ ನಡೆಸುವ ಸಂಘಟನೆಗಳು ಹಾಗೂ ನಾಯಕರು ದೇಶಾದ್ಯಂತ ಇದ್ದಾರಾದರೂ ಆ ಶಕ್ತಿಗಳ ವಿರುದ್ಧ ಅಲ್ಲಲ್ಲಿ ಕೇವಲ ಸಾಂಕೇತಿಕ ಕ್ರಮ ಆಗಿರುವುದನ್ನು ಬಿಟ್ಟರೆ ಬೇರೆ ಯಾವುದೇ ಸೂಕ್ತ ಕಾನೂನು ಕ್ರಮ ಆಗಿರುವುದಿಲ್ಲ. ಅಂತಹ ಶಕ್ತಿಗಳ ಹಿಂದಿರುವ ನಾಯಕರು, ಸಂಘಟನೆಗಳ ಮೇಲೆ ಎಷ್ಟು ಎನ್ ಐ ಎ ದಾಳಿ ನಡೆದಿವೆ ? ಎಷ್ಟು ಮಂದಿಯ ಬಂಧನವಾಗಿದೆ ? ಗೌರಿ ಲಂಕೇಶ್, ಪನ್ಸಾರೆಯಂತಹ ಬುದ್ಧಿಜೀವಿಗಳ ಕೊಲೆ ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಆದರೆ ಅವರ ಹಿಂದಿರುವ ಸೂತ್ರಧಾರ ಸಂಘಟನೆಗಳ ನಾಯಕರನ್ನು ಬಂಧಿಸಿದ ಬಗ್ಗೆ ವರದಿಯಾಗಿಲ್ಲ. ಕೇಂದ್ರ ಸರಕಾರಕ್ಕೆ ತಾನು ಹೇಳಿಕೊಳ್ಳುವಂತೆ ನಿಜವಾಗಿಯೂ ಉಗ್ರ ಚಟುವಟಿಕೆ ಹಾಗು ಕೋಮು ಹಿಂಸೆಗಳನ್ನು ನಿಗ್ರಹಿಸುವ ಪ್ರಾಮಾಣಿಕ ಉದ್ದೇಶ ಇದ್ದರೆ ಸಂಘಪರಿವಾರದ ಸಂಘಟನೆಗಳ ನಾಯಕರಿಗೆ ಶಿಕ್ಷೆಯಾಗಬೇಕಿತ್ತು ಆದರೆ ಹಾಗಾಗಿಲ್ಲ.

ಕೇಂದ್ರ ತನಿಖಾ ಸಂಸ್ಥೆಗಳಿಗೆ ಬಹಳ ಮಹತ್ವ ಹಾಗು ಅಷ್ಟೇ ಜವಾಬ್ದಾರಿಯಿದೆ. ಆಳುವವರ ರಾಜಕೀಯ ಲೆಕ್ಕಾಚಾರಗಳು, ಹಿತಾಸಕ್ತಿಗಳು, ಒತ್ತಡಗಳಿಗೆ ಈ ಸಂಸ್ಥೆಗಳು ದುರ್ಬಳಕೆಯಾಗಬಾರದು. ಅವುಗಳ ಸ್ವಾಯತ್ತತೆ ಹಾಗು ಸ್ವಾತಂತ್ರ್ಯ ಉಳಿಯುವುದು ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಬಹಳ ಮುಖ್ಯವಾಗಿದೆ ಎಂದು ಒಕ್ಕೂಟದ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!