ಕಮಲಾಪುರದಲ್ಲಿ ಸಚಿವ ಯೋಗೇಶ್ವರ್ ಅವರಿಂದ ಪ್ರವಾಸೋದ್ಯಮ ಅಧಿಕಾರಿಗ ಜತೆ ಸಭೆ ಕಮಲಾಪುರ ಜೂ ಆವರಣದ 250 ಎಕರೆ ಪ್ರದೇಶವನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಕೆ: ಸಚಿವ ಯೋಗೇಶ್ವರ್

ಹೊಸಪೇಟೆ( ವಿಜನಯಗನರ) ಜೂ.30(ಕರ್ನಾಟಕ ವಾರ್ತೆ): ಪ್ರವಾಸೋದ್ಯಮದ ಅಭಿವೃದ್ದಿಯ ದೃಷ್ಟಿಯಿಂದ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್ ಆವರಣದ 250 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್, ತ್ರಿ ಸ್ಟಾರ್ ಹೋಟೆಲ್, ವಸತಿ ನಿಲಯ ಹಾಗೂ ಹೆಲಿಕ್ಯಾಪ್ಟರ್ ಲ್ಯಾಂಡ್ ಏರಿಯಾ ಒಳಗೊಂಡಂತೆ ಸರ್ವತೋಮುಖ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಪರಿಸರ ಮತ್ತು ಜೀವಿ ಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಹೇಳಿದರು.
ಕಮಲಾಪುರ ಪಟ್ಟಣದ ಮಯೂರ ಭುವನೇಶ್ವರಿ ಹೋಟೆಲ್‍ನಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಜೊತೆಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬರುವ ವಿದ್ಯಾರ್ಥಿಗಳು ಉಳಿದಿಕೊಳ್ಳಲು ಒಂದು ವಸತಿ ನಿಲಯವನ್ನು ಜಿಯೋಲಾಜಿಕಲ್ ಪಾರ್ಕ್ ಆವರಣದಲ್ಲಿ ನಿರ್ಮಿಸಲಾಗುವುದು. 1 ಸಾವಿರ ಶಾಲಾ-ಕಾಲೇಜು ಮಕ್ಕಳು ಉಳಿದುಕೊಳ್ಳಲು ಒಂದು ಸುಸಜ್ಜಿತವಾದ ವಸತಿ ನಿಲಯವನ್ನು ಪ್ರಾರಂಭಿಸಲಾಗುತ್ತದೆ. ಇದು ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಲು ಬರುವ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ದರದಲ್ಲಿ ಇಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಮಕ್ಕಳಿಗೆ ಇತಿಹಾಸ ಪರಿಚಯಿಸುವ ಕೆಲಸ ಮಾಡಲಾಗುತ್ತದೆ. ಸ್ಥಳೀಯರಿಗೆ ಅವಕಾಶ ನೀಡಲು ಹೋಂ ಸ್ಟೇಗಳನ್ನು ನಿರ್ಮಿಸುತ್ತಿದ್ದು, ಇದರಿಂದ ಇಲ್ಲಿನ ಸುತ್ತಮುತ್ತಲಿನ ಸ್ಥಳೀಯರಿಗೆ ಉದ್ಯೋಗ ನೀಡಿದಂತಾಗುತ್ತದೆ ಎಂದರು.
ಮತ್ತೊಂದು ಹಂಪಿಯ ನಿರ್ಮಾಣ ಅಸಾಧ್ಯ, ಪ್ರಸ್ತುತ ಇರುವ ಐತಿಹಾಸಿಕ ತಾಣವನ್ನು ರಕ್ಷಣೆ ಮತ್ತು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಗುತ್ತದೆ ಎಂದರು. ಹಂಪಿಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತದೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಅಂಜನಾದ್ರಿ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು,ಪ್ರತಿನಿತ್ಯ ಹಲಾವರು ಜನ ಪ್ರವಾಸಿಗರು ಬೇಟಿ ನೀಡುತ್ತಾರೆ. ಬೆಟ್ಟಕ್ಕೆ ರೋಪ್ ವೇ ನಿರ್ಮಾಣ, ರಸ್ತೆಗಳ ಅಭಿವೃದ್ಧಿ,ಮೂಲಭೂತ ಸೌಲಭ್ಯ ಒಳಗೊಂಡಂತೆ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ 500 ಕೋಟಿ ವೆಚ್ಚ ಮಾಡಲಾಗುವುದು ಎಂದು ಅವರು ವಿವರಿಸಿದರು.
ಜಿಯೋಲಾಜಿಕಲ್ ಪಾರ್ಕ್ ಆವರಣದಲ್ಲಿ ಇನ್ನು 8ರಿಂದ10 ದಿನದಲ್ಲಿ ತ್ರಿ ಸ್ಟಾರ್ ಹೋಟೆಲ್‍ಗೆ ಶಿಲನ್ಯಾಸ ಮಾಡಲಾಗುತ್ತದೆ. ಎರಡು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ರೀತಿಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಐತಿಹಾಸಿಕ ತಾಣ ಹಂಪಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳು ಈಗಾಗಲೇ ಶೇ.80ರಿಂದ 90ರಷ್ಟು ಪೂರ್ಣಗೊಂಡಿದ್ದು,ಉಳಿದಿರುವ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಯೋಗೇಶ್ವರ್ ಅವರು ಪ್ರವಾಸಿ ತಾಣಗಳ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಎಂದು ತಿಳಿಸಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶೃತಿ, ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಇದ್ದರು.

Latest Indian news

Popular Stories

error: Content is protected !!