ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ?

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಘೋಷಿಸಿದ ಬಳಿಕ ಬಿಜೆಪಿಯಲ್ಲಿ ಮುಂದಿನ ನಾಯಕನ ಆಯ್ಕೆ ಬಗ್ಗೆ ತೀವ್ರ ಕುತೂಹಲ ಹೆಚ್ಚಿದೆ. ಮುಖ್ಯಮಂತ್ರಿ ರೇಸ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರ್ನಾಟಕ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರುಗಳು ಕೇಳಿ ಬರುತ್ತಿವೆ.
ಯಡಿಯೂರಪ್ಪ ಅವರ ರಾಜೀನಾಮೆ ಬಗ್ಗೆ ಇಂದು ಬೆಳಗಿನವರೆಗೂ ಗೊಂದಲಗಳಿದ್ದವು. ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಭಾವೋದ್ವೇಗದಿಂದ ಭಾಷಣ ಮಾಡಿದ ಯಡಿಯೂರಪ್ಪ ತಮ್ಮ ರಾಜೀನಾಮೆಯನ್ನು ಘೋಷಣೆ ಮಾಡಿದರು. ಲಿಂಗಾಯಿತ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ.
ಸೋಮವಾರ ಬೆಳಗ್ಗೆ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ಬಂದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಸರು ಕೂಡ ಬಲವಾಗಿ ಕೇಳಿ ಬರುತ್ತಿದೆ. ಈ ಮಧ್ಯೆ ಯಡಿಯೂರಪ್ಪ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಬಸವರಾಜ್ ಬೊಮ್ಮಾಯಿ ಅವರ ಹೆಸರು ಕೂಡಾ ಚಾಲ್ತಿಯಲ್ಲಿದೆ.
ಈ ಮಧ್ಯೆ ಪಕ್ಷದ ಸಂಘಟನೆಯಲ್ಲಿ ಪ್ರಭಾವಿಯಾಗಿರುವ ಬಿ.ಎಲ್.ಸಂತೋಷ್ ಅವರ ಹೆಸರು ಬಹುತೇಕ ಅಂತಿಮಗೊಳ್ಳಲಿದೆ ಎಂಬ ಮಾತುಗಳಿವೆ. ಸಂತೋಷ್ ಅವರು ಹೈಕಮಾಂಡ್ ಮಟ್ಟದಲ್ಲಿ ಹೆಚ್ಚು ಪ್ರಭಾವಿಯಾಗಿದ್ದು, ಸಂಘಟನೆ ವಿಷಯದಲ್ಲಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಇವರನ್ನೇ ಮುಖ್ಯಮಂತ್ರಿ ಮಾಡುವ ಸಾಧ್ಯತೆಗಳಿವೆ.
ಈವರೆಗೂ ಯಾವುದೇ ಚುನಾವಣೆಯನ್ನು ಎದುರಿಸದೆ ಸಂಘಟನಾತ್ಮಕವಾಗಿ ಅಷ್ಟೇ ಗುರುತಿಸಿಕೊಂಡಿರುವ ಸಂತೋಷ್ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ಆದರೆ ಸ್ಥಳೀಯ ಶಾಸಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಕುತೂಹಲ ಇದೆ. ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಮುಖ್ಯಮಂತ್ರಿ ಹುದ್ದೆಗೆ ಸಮರ್ಥ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಆಡಳಿತಾತ್ಮಕವಾಗಿ ಎಲ್ಲರೂ ಪ್ರಬಲರಾಗಿದ್ದರೂ ಸಮುದಾಯದ ನಾಯಕತ್ವದ ದೃಷ್ಟಿಯಿಂದ ಯಡಿಯೂರಪ್ಪ ಅವರ ಸ್ಥಾನ ತುಂಬಲು ಮತ್ತಷ್ಟು ಬಲಿಷ್ಟ ನಾಯಕರ ಅಗತ್ಯವಿದೆ.

Latest Indian news

Popular Stories

error: Content is protected !!