ಕೊಡವ ಮುಸ್ಲಿಮರಿಂದ ಐಮಂಗಲದಲ್ಲಿ ಪುತ್ತರಿ ಆಚರಣೆ

ಗೋಣಿಕೊಪ್ಪ,ನ.28: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕದಿರು ತೆಗೆಯುವ ಪುರಾತನ ಪದ್ಧತಿಯನ್ನು ಸೋಮವಾರ ರಾತ್ರಿ ಕೊಡವ ಮುಸ್ಲಿಂ ಸಮುದಾಯದವರು ಐಮಂಗಲದಲ್ಲಿ (ಕೊಮ್ಮೆತೊಡು) ನೂರಾರು ಸದಸ್ಯರ ಸಹಭಾಗಿತ್ವದೊಂದಿಗೆ ಅದ್ದೂರಿಯಾಗಿ ಆಚರಿಸಿದರು.

ರಾತ್ರಿ 8:30 ಗಂಟೆಗೆ ಸರಿಯಾಗಿ ಐಮಂಗಲ ಗ್ರಾಮದ ಕೋಳುಮಂಡ ಕುಟುಂಬಸ್ಥರ ಜಮ್ಮ ಗದ್ದೆಯಲ್ಲಿ ಈ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಕೆಎಂಎ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಐಮಂಗಲ ಗ್ರಾಮದ ಹಿರಿಯರು ಮತ್ತು ಕೆ.ಎಂ.ಎ. ಸದಸ್ಯರಾದ ಕೂತಂಬಟ್ಟೀರ ಹುಸೇನ್ ಅವರು ಪರಿಶುದ್ಧ ಸ್ವಲಾತ್ ನೊಂದಿಗೆ ಭತ್ತದ ತೆನೆಯನ್ನು ಕುಯ್ದು ನೆರೆದಿದ್ದವರಿಗೆಲ್ಲ ಹಂಚಿದರು.

ಕಾರ್ಯಕ್ರಮದಲ್ಲಿ ಕೆ.ಎಂ.ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಜಂಟಿ ಕಾರ್ಯದರ್ಶಿ ಕರತೋರೆರ ಕೆ ಮುಸ್ತಫ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ಹಿರಿಯ ನಿರ್ದೇಶಕರಾದ ಚಿಮ್ಮಿಚಿರ ಕೆ. ಇಬ್ರಾಹಿಂ(ಉಮ್ಮಣಿ), ಕೊಂಡಂಗೇರಿ ಜಮಾಅತ್ ಅಧ್ಯಕ್ಷರು ಮತ್ತು ಕೆ.ಎಂ.ಎ. ನಿರ್ದೇಶಕರಾದ ಕುಪ್ಪಂದಿರ ಕೆ. ಯೂಸೂಫ್ ಹಾಜಿ, ಕಾಟ್ರಕೊಲ್ಲಿ ಜಮಾಅತಿನ ಅಧ್ಯಕ್ಷರು ಮತ್ತು ಸಂಸ್ಥೆಯ ನಿರ್ದೇಶಕರಾದ ಆಲೀರ ಎಂ. ರಶೀದ್ ಸೇರಿದಂತೆ, ಸಂಸ್ಥೆಯ ಪದಾಧಿಕಾರಿಗಳು, ಕೊಟ್ಟಮುಡಿ, ಚೆರಿಯಪರಂಬು, ಕುಂಜಿಲ,ಕೊಳಕೇರಿ, ಕೊಂಡಂಗೇರಿ, ಚಾಮಿಯಾಲ, ಗುಂಡಿಕೆರೆ, ನಲ್ವತ್ತೋಕ್ಲು, ಅಂಬಟ್ಟಿ ಕಂಡಂಗಾಲ, ಕಾಟ್ರಕೊಲ್ಲಿ, ಹಳ್ಳಿಗಟ್ಟು, ಬೇಗೂರು ಮೊದಲಾದ ಪ್ರದೇಶಗಳ ಸದಸ್ಯರು, ಐಮಂಗಲದ ಹಲವಾರು ಗ್ರಾಮಸ್ಥರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

ಕದಿರು ತೆಗೆದ ಬಳಿಕ ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಕೋಳುಮಂಡ ರಫೀಕ್ ಅವರು ತಮ್ಮ ಮನೆಯಲ್ಲಿ ಸಾಂಪ್ರದಾಯಿಕ ತಂಬಿಟ್ಟು- ಪುತ್ತರಿ ಗೆಣಸು ಉಪಹಾರ ಮತ್ತು ಊಟೋಪಚಾರವನ್ನು ವ್ಯವಸ್ಥೆಗೊಳಿಸಿದ್ದರು. ಗದ್ದೆಯಿಂದ ತರಲಾದ ಕದಿರನ್ನು ಊಟದ ನಂತರ ಮನೆಗಳಿಗೆ ಕೊಂಡೊಯ್ಯಲಾಯಿತು.

Latest Indian news

Popular Stories