ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಅಬ್ಬಿ ಫಾಲ್ಸ್ ಗೆ ಬಂದಾಕೆ ಬೆಂಗಳೂರಿನಲ್ಲಿ ಪತ್ತೆ?

ಮೈಸೂರು ಜಿಲ್ಲೆ ಬೆಟ್ಟದಪುರದ ಬಾರಸೆ ಗ್ರಾಮದ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಇದೀಗ ನಾಟಕೀಯ ತಿರುವು ಪಡೆದುಕೊಂಡಿದೆ. ಈಕೆ
ಮಡಿಕೇರಿ ಅಬ್ಬಿ ಫಾಲ್ಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಹುಸಿಯಾಗಿದ್ದು ಬೆಂಗಳೂರಿನಲ್ಲಿ ಜೀವಂತವಾಗಿದ್ದಾಳೆ ಎಂದು ತಿಳಿದು ಬಂದಿದೆ.

ಸರಸ್ವತಿ (33) ಎಂಬ ಮಹಿಳೆ ತಾ.7ರಂದು ನಾಪತ್ತೆಯಾಗಿರುವುದಾಗಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈಕೆಯ ಪತ್ತೆಗೆ ಕಾರ್ಯಕ್ಕೆ ಮುಂದಾದ ಸಂದರ್ಭ ಅಬ್ಬಿ ಫಾಲ್ಸ್​ ಬಳಿ ಮಹಿಳೆಯ ಚಪ್ಪಲಿ, ಬಟ್ಟೆ, ಪರ್ಸ್ ಪತ್ತೆಯಾಗಿದ್ದವು. ಆಕೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿ ಎನ್​ಡಿಆರ್​ಎಫ್​, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ.

ಈ ನಡುವೆ ಬೆಟ್ಟದಪುರದಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿರುವ ಸರಸ್ವತಿ ತಾನು ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ.
ನಾಪತ್ತೆಯಾಗುವ ಮುನ್ನ ಬರೆದಿಟ್ಟಿದ್ದ ಪತ್ರದಲ್ಲಿ ಏನಿದೆ?
ಈಕೆ ನಾಪತ್ತೆಯಾಗುವ ಮುನ್ನ ಮನೆಯಲ್ಲಿ ಬರೆದಿಟ್ಟು ಬಂದಿರುವ ಪತ್ರದಲ್ಲಿ ಈಕೆ ತಾನು ಅನುಭವಿಸಿದ ಕಷ್ಟಗಳನ್ನು ಹೇಳಿಕೊಂಡಿದ್ದಾಳೆ.
ನನ್ನ ಈ ನಿರ್ಧಾರಕ್ಕೆ ಯಾರೂ ಕಾರಣರಲ್ಲ. ಮದ್ವೆಯಾಗಿ 12-13 ವರ್ಷದಿಂದ ಎಷ್ಟೇ ಕಷ್ಟ ಆದ್ರೂ ಸಹಿಸಿಕೊಂಡು ಬಂದೆ. ಆದ್ರೆ ನಮ್ಮನೇಲಿ ನನ್ನ ಇಷ್ಟ ಕಷ್ಟ ಏನೂ ನಡೀಲಿಲ್ಲ. ಹೊರಗಡೆ ಹೋಗಬೇಕು ಅಂದ್ರೆ ದುಡ್ಡು ಕೊಡ್ತಿರಲಿಲ್ಲ. ನಾನೂ ಅದು ಬೇಕು ಇದು ಬೇಕು ಕೇಳ್ತಿರಲಿಲ್ಲ. ಗಂಡ ಒಂದು ದಿನವೂ ಎಲ್ಲೂ ಕರ್ಕೊಂಡು ಹೋಗ್ಲಿಲ್ಲ. ಬರೀ ದನ ಕರು ಇದ್ರಲ್ಲೇ ಕಾಲ ಕಳೆದ್ರು. ನಾನು ಕೆಲಸಕ್ಕೆ ಹೋಗ್ತೀನಿ ಅಂದ್ರೂ ಕಳಿಸ್ಲಿಲ್ಲ, ಯಾರನ್ನು ಮಾತಾಡಿಸಿದ್ರೂ ಗಂಡಂಗೆ ಅನುಮಾನ. ಇತ್ತೀಚೆಗೆ ನನಗೆ ಸಹಿಸಿಕೊಳ್ಳಲು ಆಗ್ತಿಲ್ಲ, ನಾನು ಎಲ್ಲೇ ಹೋದ್ರೂ, ಏನೇ ಮಾಡ್ಕೊಂಡು ಸತ್ರೂ ಯಾರೂ ಜವಾಬ್ದಾರರಲ್ಲ. ನನ್ನನ್ನು ಹುಡುಕಬೇಡಿ, ನನ್ನ ಮಕ್ಕಳನ್ನು ಚೆನ್ನಾಗಿ ನೋಡ್ಕೊಳಿ ಎಂದು ಆ ಪತ್ರದಲ್ಲಿ ಬರೆದಿದೆ.
ಜೀವ ಕಳೆದುಕೊಳ್ಳುವುದಾಗಿ ಪರೋಕ್ಷವಾಗಿ ಕುರುಹು ನೀಡಿ ನಾಪತ್ತೆಯಾಗಿದ್ದ ಈಕೆ ಪೊಲೀಸ್ ಇಲಾಖೆ ಮತ್ತು ಮನೆಯವರನ್ನು ಪೀಕಲಾಟಕ್ಕೆ ತಳ್ಳಿದ್ದು ಸುಳ್ಳಲ್ಲ

Latest Indian news

Popular Stories