ವಿಜಯಪುರ: ಅನ್ನಭಾಗ್ಯ ಯೋಜನೆಯಡಿ ಆಗಸ್ಟ್ ತಿಂಗಳ ಹಣವನ್ನು ಜಿಲ್ಲೆಯ ಅರ್ಹ 3,73,236 ಪಡಿತರ ಚೀಟಿಗಳ ಪೈಕಿ 12,95,465 ಸದಸ್ಯರಿಗೆ 170 ರೂ.ರಂತೆ ಒಟ್ಟು 22.02 ಕೋಟಿ ರೂ.ಗಳನ್ನು ಅರ್ಹ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅನ್ನ ಭಾಗ್ಯ ಯೋಜನೆಯಡಿ ಪಡಿತರ ವಸ್ತುಗಳನ್ನು ಪಡೆದಿರುವ ಪಡಿತರ ಚೀಟಿದಾರರಿಗೆ ಈ ತಿಂಗಳಲ್ಲಿ 5 ಕೆಜಿ ಅಕ್ಕಿಯ ಹಣವನ್ನು ಆಯಾ ಪಡಿತರ ಚೀಟಿದಾರರ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದ್ದು, ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರು ಇರುವ ಅಂತ್ಯೋದಯ ಪಡಿತರ ಚೀಟಿಗೆ ಪ್ರತಿ ಹೆಚ್ಚುವರಿಗೆ ಸದಸ್ಯರಿಗೆ 170 ರೂ.ರಂತೆ ಮತ್ತು ಆದ್ಯತಾ ಕುಟುಂಬ ಪಡಿತರ ಚೀಟಿ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 170 ರೂ. ರಂತೆ ಹಣ ವರ್ಗಾವಣೆ ಮಾಡಲಾಗುವುದು.
ಎಲ್ಲ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಮುಖ್ಯಸ್ಥರು ರಾಷ್ಟ್ರೀಕೃತ ಬ್ಯಾಂಕ್ ಖಾತೆ ಹೊಂದಿರಬೇಕು ಹಾಗೂ ಖಾತೆಯ ಇ-ಕೆವೈಸಿ ಆಗಿರತಕ್ಕದ್ದು. ಇ-ಕೆವೈಸಿ ಆಗದೇ ಇದ್ದಲ್ಲಿ ಕೂಡಲೇ ಆಯಾ ಬ್ಯಾಂಕಿನ್ ಶಾಖೆಯನ್ನು ಸಂಪರ್ಕಿಸಿ ಇ-ಕೆವೈಸಿಯನ್ನು ಮಾಡಿಸಿ ಖಾತೆ ಚಾಲ್ತಿಯಲ್ಲಿಟ್ಟುಕೊಳ್ಳುವಂತೆ ಹಾಗೂ ಬ್ಯಾಂಕ್ ಖಾತೆ ಹೊಂದದೇ ಇದ್ದಲ್ಲಿ ಅಂಚೆ ಕಚೇರಿಯಲ್ಲಿ ಐಪಿಪಿಬಿ ಬ್ಯಾಂಕ್ ಖಾತೆಯನ್ನು ಹೊಂದಬಹುದಾಗಿದ್ದು, ಪಡಿತರ ಚೀಟಿದಾರರು ಹೆಚ್ಚಿನ ಮಾಹಿತಿಗಾಗಿ ಆಯಾ ನ್ಯಾಯಬೆಲೆ ಅಂಗಡಿಕಾರರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.