ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಐದನೇ ವಾರ್ಡ್ ಕಾಟ್ರಕೊಲ್ಲಿ ವಾರ್ಡಿನ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಹೊಂದಿದ್ದ ಪಿ. ಆರ್ ಮಂಜುಳಾ ಎಂಬುವರು ಸತತವಾಗಿ ನಾಲ್ಕು ಸಾಮಾನ್ಯ ಸಭೆಗೆ ಗೈರು ಹಾಜರಾದ್ದರಿಂದ ಪ್ರಕರಣ ಸಂಖ್ಯೆ 43ರ ಅಡಿಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ರವರು 23.02.2024 ಪಿ.ಆರ್ ಮಂಜುಳಾ ರವರನ್ನು ಗ್ರಾಮ ಪಂಚಾಯಿತಿ ಸದಸ್ಯತನದಿಂದ ಅನರ್ಹಗೊಳಿಸಿದ್ದಾರೆ. ಹಾಗೆ ಇನ್ನು ಆರು ವರ್ಷಗಳ ತನಕ ಇವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಆದೇಶವನ್ನು ಹೊರಡಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಆಯ್ಕೆಗೊಂಡಿದ್ದ ಪಿ.ಆರ್ ಮಂಜುಳಾ ಕಳೆದ ಎರಡುವರೆ ವರ್ಷಗಳ ಹಿಂದೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭ ಬಿಜೆಪಿ ಬೆಂಬಲಿತ ಸದಸ್ಯಗೆ ಅಡ್ಡ ಮತದಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇವರ ಮೇಲೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿಯ ಮೂಲಕ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಇದೀಗ ಆದೇಶ ಹೊರ ಬಿದ್ದಿದೆ.
ಒಟ್ಟು 20 ಸದಸ್ಯ ಬಲ ಹೊಂದಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ 11 ಬಿಜೆಪಿ ಬೆಂಬಲಿತ ಸದಸ್ಯರಿದ್ದು ಇದೀಗ ಒರ್ವ ಸದಸ್ಯ ಅನರ್ಹಗೊಂಡಿದ್ದರಿಂದ 10 ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆಆಗಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಟ್ಟು ಒಂಬತ್ತು ಇದ್ದು ಸಾಮಾನ್ಯ ಸಭೆ ನಡೆಸಲು ನೂತನ ಅಧ್ಯಕ್ಷರಿಗೆ ಇನ್ನೆರಡು ಸಂಖ್ಯಾ ಬಲದ ಅವಶ್ಯಕತೆ ಇದೆ. ಕೋರಂ ಇಲ್ಲದೆ ಸಾಮಾನ್ಯ ಸಭೆ ಮುಂದೂಡುತ್ತಿರುವುದರಿಂದ ಸಭೆಗೆ ಗೈರು ಹಾಜರಾಗುತ್ತಿರುವ ಬಿಜೆಪಿ ಬೆಂಬಲಿತ ಸದಸ್ಯರಿಗೆ ಪ್ರಕರಣ ಸಂಖ್ಯೆ 43 ಅನ್ವಯಿಸುವುದಿಲ್ಲ. ಒಂದೊಮ್ಮೆ ಸಾಮಾನ್ಯ ಸಭೆ ನಡೆದು ಸದಸ್ಯರು ಸತತವಾಗಿ ನಾಲ್ಕು ಸಾಮಾನ್ಯ ಸಭೆಗೆ ಗೈರು ಹಾಜರಾದರೆ ಮಾತ್ರ ಸದಸ್ಯರನ್ನು ಅನರ್ಹಗೊಳಿಸಬಹುದಾಗಿದೆ.