ಪೊನ್ನಂಪೇಟೆ,ಸೆ. 05: ಜಿಲ್ಲೆಯ ಕೆಲ ಭಾಗಗಳಲ್ಲಿ ಕೃಷಿ ಭೂಮಿ ಡೀಮ್ಡ್ ವ್ಯಾಪ್ತಿಗೆ ಸಿಲುಕಿದ್ದು, ರೈತರಿಗೆ ಭೂಮಿ ಕಳೆದುಕೊಳ್ಳುವ ದುಸ್ಥಿತಿ ಏರ್ಪಟ್ಟಿದೆ. ಜತೆಗೆ, ರೈತರಿಗೆ ಆಯಾ ಭೂಮಿಯ ದಾಖಲೆ ಒದಗಿಸಲು ಸಹಕಾರಿಯಾಗಬೇಕಿದ್ದ ಸಮೀಕ್ಷೆ ರೈತರ ಬೇಡಿಕೆಗಳಿಗೆ ಪೂರಕವಾಗಿ ನಡೆದಿಲ್ಲ.
ಆದ್ದರಿಂದ ಸರಕಾರ ಮತ್ತೊಮ್ಮೆ ಭೂ ಸಮೀಕ್ಷೆ ಕೈಗೊಂಡು ರೈತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾದ ಅಮ್ಮಣಿಚಂಡ ರಂಜು ಪೂಣಚ್ಚ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿ ಆ್ಯಂಡ್ ಡಿ ಅಥವಾ ಡೀಮ್ಡ್ ಲ್ಯಾಂಡ್ ಎನ್ನಲಾಗುವ ಕೃಷಿ ಚಟುವಟಿಕೆಗೆ ಪೂರಕವಲ್ಲದ ಬೆಟ್ಟ, ಬಾಣೆ, ಜಮ್ಮಾ, ಪೈಸಾರಿ, ಕಾನ, ಕುಮ್ಕಿ ಸೇರಿದಂತೆ ನೀರಾವರಿ ಪ್ರದೇಶವಲ್ಲದ ಭೂಮಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿವೆ.
ಅರಣ್ಯ ಪ್ರದೇಶವೆಂದು ಗುರುತಿಸಿಕೊಳ್ಳುವ ಡೀಮ್ಡ್ (ಸಿ ಆ್ಯಂಡ್ ಡಿ) ಸಂಕೋಲೆಯಲ್ಲಿ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಸಿಲುಕಿದ್ದು, ರೈತರ ನೆಮ್ಮದಿಗೆ ತೂಗುಗತ್ತಿಯಾಗಿ ಪರಿಣಮಿಸಿದೆ. ಅನೇಕ ದಶಕಗಳಿಂದ ಉಳುಮೆ ಮಾಡುತ್ತಿರುವ ಈ ಭೂಮಿಗೆ ದಾಖಲೆಗಳನ್ನು ಪಡೆಯಲು ರೈತರು ಹೆಣಗಾಡುತ್ತಿದ್ದಾರೆ. ಎಲ್ಲಾ ಅನಾನುಕೂಲಗಳಿಗೆ ಸರಕಾರವೇ ನೇರ ಕಾರಣ ಎಂದು ಅವರು ದೂರಿದ್ದಾರೆ.
1991, 1994ರಲ್ಲಿ ಸರಕಾರದ ಆದೇಶಾನುಸಾರ ಅರಣ್ಯ ಇಲಾಖೆ ವ್ಯಾಪ್ತಿಯ ಸಿ ಆ್ಯಂಡ್ ಡಿ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದ್ದು, ಈ ಭೂಮಿಗಳನ್ನು ‘ಲ್ಯಾಂಡ್ ಬ್ಯಾಂಕ್’ನಲ್ಲಿ ಸೇರಿಸಲಾಗಿದೆ. ಲ್ಯಾಂಡ್ ಬ್ಯಾಂಕ್‌ನಲ್ಲಿ ರಾಜ್ಯಾದ್ಯಂತ 1,31,866 ಹೆಕ್ಟೇರ್ ಭೂಮಿಯಿದ್ದು, ಇದನ್ನು ಕೇವಲ ಸಾರ್ವಜನಿಕ ಹಿತಾಸಕ್ತಿಗೆ ಮಾತ್ರ ಬಳಸಬೇಕೆನ್ನುವ ಷರತ್ತಿದೆ.
ಇದೇ ವ್ಯಾಪ್ತಿಯಲ್ಲಿನ 11,722.29 ಹೆಕ್ಟೇರ್ ಭೂಮಿಯನ್ನು ಇತ್ತೀಚಿಗೆ ಪೂರ್ಣ ಪ್ರಮಾಣದಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ ಎನ್ನುವ ಅಂಶ ರೈತರ ಆತಂಕಕ್ಕೆ ಕಾರಣವಾಗಿದೆ ಎಂದು ವಿವರಿಸಿರುವ ರಂಜು ಪೂಣಚ್ಚ, ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಲಕ್ಷಾಂತರ ಸಾಗುವಳಿದಾರರು ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ಮಂಜೂರಾತಿ ನಿರೀಕ್ಷೆಯಲ್ಲಿದ್ದಾರೆ.
ಆದರೆ ಸಿ ಮತ್ತು ಡಿ ಅಥವಾ ಡೀಮ್ಡ್ ಅರಣ್ಯ ಭೂಮಿ ಕುರಿತ ಅಸ್ಪಷ್ಟತೆಯನ್ನೇ ಮುಂದಿಟ್ಟುಕೊಂಡು ಭೂಮಿ ಮಂಜೂರು ಮಾಡಲಾಗುತ್ತಿಲ್ಲ. ಜೊತೆಗೆ ನಾನಾ ಕಡೆ ಅರಣ್ಯ ವ್ಯಾಪ್ತಿಯಲ್ಲಿರುವ ವಸತಿ, ಜಮೀನುಗಳಿಗೆ ಗ್ರಾ.ಪಂಗಳಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದರೂ ಅಗತ್ಯ ದಾಖಲೆಗಳು ಮಾತ್ರ ದೊರೆಯದಂತಾಗಿದೆ ಎಂದು ಆರೋಪಿಸಿದ್ದಾರೆ.
ಕೊಡಗು ಜಿಲ್ಲೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ರಾಜ್ಯ ಸರಕಾರವು 1991, 1994ರ ಆದೇಶಗಳನ್ನು ಹೈಕೋರ್ಟ್ ಗಮನಕ್ಕೆ ತಾರದ ಪರಿಣಾಮವಾಗಿ, ಈಗಾಗಲೇ ಒಟ್ಟು 11,722.29 ಹೆಕ್ಟೇರ್ ಸಿ ಆ್ಯಂಡ್ ಡಿ ಭೂಮಿ ಅರಣ್ಯ ಇಲಾಖೆಗೆ ವರ್ಗಾಯಿಸಬೇಕೆನ್ನುವ ಆದೇಶ ಹೊರಬಿದ್ದಿದೆ. ಈ ಆದೇಶದಿಂದಾಗಿ ಇನ್ನುಳಿದ ರೈತರಲ್ಲಿ ಆತಂಕ ತೀವ್ರವಾಗಿದೆ.
ಸರಕಾರ ಇನ್ನಾದರೂ ಎಚ್ಚೆತ್ತು ಪಾರದರ್ಶಕ ರೀತಿಯಲ್ಲಿ ಭೂ ಸಮೀಕ್ಷೆ ನಡೆಸಿ ರೈತರ ಕೃಷಿ ಜಮೀನುಗಳು ಸಿ ಆ್ಯಂಡ್ ಡಿ ಸಂಕೋಲೆಯಲ್ಲಿ ಸಿಲುಕಿ ಅರಣ್ಯ ಇಲಾಖೆ ತೆಕ್ಕೆಗೆ ಜಾರದಂತೆ ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ಕೊಡಗಿನ ರೈತರ ಬೇಡಿಕೆಯಾಗಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ರಂಜು ಪೂಣಚ್ಚ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.