ರೆಸಾರ್ಟ್ ಹೋಂ ಸ್ಟೇಗಳಲ್ಲಿ ಕೊಡವ ಸಾಂಪ್ರದಾಯಿಕ ಆಟ್ ಪಾಟ್ ಹಾಗೂ ಉಡುಗೆ ತೊಡುಗೆಗಳ ದುರ್ಬಳಕೆ ನಿಲ್ಲಲಿ ಚಮ್ಮಟೀರ ಪ್ರವೀಣ್ ಉತ್ತಪ್ಪ

ಕೊಡವ ಜನಾಂಗದ ಉಡುಗೆ ತೊಡುಗೆಗಳು ಮಾತ್ರವಲ್ಲ ಕೊಡವ ಪದ್ದತಿ-ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ ಸೇರಿದಂತೆ ಆಹಾರ ಪದ್ಧತಿ ಎಲ್ಲಾವು ವಿಭಿನ್ನ ಮತ್ತು ವಿಶೇಷ. ದೇಶದ ಮೂಲೆ ಮೂಲೆಯಲ್ಲಿ ಹುಡುಕಿದರೂ ಇಂತಹ ವಿಭಿನ್ನ ಹಾಗೂ ವಿಶಿಷ್ಟ ಜನಾಂಗವನ್ನು ಕಾಣಲು ಸಾಧ್ಯವಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ನವಿಲು ಕುಣಿಯುತ್ತೆ ಎಂದು ಕೆಂಬೂತ ಗರಿ ಬಿಚ್ಚಿ ಕುಣಿಯಲು ಹೊರಟ ಹಾಗೆ ಕೆಲವರು ಅವರವರ ಮೂಲ ಪದ್ದತಿ ಸಂಸ್ಕೃತಿ ಸೇರಿದಂತೆ ತಮ್ಮ ಸ್ವಂತಿಕೆಯನ್ನು ಬಿಟ್ಟು ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ, ಕೊಡವ ಸಾಂಪ್ರದಾಯಿಕ ಆಟ್ ಪಾಟ್ ಸೇರಿದಂತೆ ಕೊಡವ ಸಂಸ್ಕೃತಿ ಸಾಂಪ್ರದಾಯವನ್ನು ನಕಲು ಮಾಡಲು ಹೊರಟಿರುವುದು ಹಾಸ್ಯಾಸ್ಪದ.

ಇದರ ಜೊತೆ ಜೊತೆಗೆ ಇದೀಗ ಕೊಡವ ಪದ್ದತಿ-ಸಂಸ್ಕೃತಿ ಸೇರಿದಂತೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಆಟ್ ಪಾಟ್’ಗಳನ್ನು ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್ ಸೇರಿದಂತೆ ಹೋಟೆಲ್ ಲಾಡ್ಜ್’ಗಳಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಹಾಗೂ ಖಂಡನೀಯ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕಿಡಿ ಕಾರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇತ್ತೀಚೆಗೆ ಮಡಿಕೇರಿಯ Coorg wilderness resort ಎಂಬ ರೆಸಾರ್ಟ್ ಒಂದರಲ್ಲಿ ಅಮೇರಿಕಾದಲ್ಲಿ ಒಂದು ಜನಾಂಗದ ಧರ್ಮಗುರು ಒಬ್ಬರನ್ನು ತಮ್ಮ ರೆಸಾರ್ಟ್’ಗೆ ಸ್ವಾಗತಿಸಲು ಇಲ್ಲಿನ ಕಾರ್ಮಿಕರಿಗೆ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆ ಸೇರಿದಂತೆ ಕೊಡವ ಸೀರೆಯನ್ನು ಉಡಿಸಿ, ತಲೆಗೆ ವಸ್ತ್ರ ಕಟ್ಟಿಸಿ ಕ್ಯಾಂಡಲ್ ಹಿಡಿದು ತಳಿಯತಕ್ಕಿ ಬೊಳಕ್’ನೊಂದಿಗೆ ಸ್ವಾಗತಿಸಿದಂತೆ ಸ್ವಾಗತ ಮಾಡಿರುವುದು ಖಂಡನೀಯ.

ಜಿಲ್ಲೆಯಲ್ಲಿ ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಈ ಹಿಂದೆ ರೆಸಾರ್ಟ್’ವೊಂದರಲ್ಲಿ ಸಪ್ಲೇಯರ್’ಗೆ ಕುಪ್ಯ ಚೇಲೆ ಹಾಕಿಸಿ ಅವಮಾನ ಮಾಡಲಾಗಿತ್ತು. ಇದೀಗ ಯಾವುದೋ ಧರ್ಮದ ಧರ್ಮಗುರುವನ್ನು ಸ್ವಾಗತಿಸಲು ಕಂಡಕಂಡವರಿಗೆ ನಮ್ಮ ಸಾಂಪ್ರದಾಯಿಕ ಉಡುಗೆಯನ್ನು ತೊಡಿಸಿ ಕೊಡವ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ. ಕೂಡಲೇ ಸಂಬಂಧಪಟ್ಟವರು ಜನಾಂಗದ ಕ್ಷಮೆಯನ್ನು ಕೋರಬೇಕು. ಉಳಿದ ಹೋಂ ಸ್ಟೇ ರೆಸಾರ್ಟ್’ಗಳು ಕೂಡ ಕೊಡವ ಪದ್ದತಿ ಸಂಸ್ಕೃತಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ನಿಲ್ಲಬೇಕು.

ಕೊಡವ ಪದ್ದತಿ-ಸಂಸ್ಕೃತಿ, ಆಚಾರ-ವಿಚಾರ, ಉಡುಗೆ ತೊಡುಗೆಗಳು ಯಾವುದೋ ರಾಜಕೀಯ ವ್ಯಕ್ತಿಗಳಿಗೆ ಅಥವಾ ಯಾವುದ್ಯಾವುದೋ ಧರ್ಮಗುರುಗಳನ್ನು ಮೆಚ್ಚಿಸಲು ಇರುವುದಲ್ಲ. ಅದಕ್ಕೆ ಅದರದೇಯಾದ ಹಿನ್ನಲೆಗಳಿವೆ ಪಾವಿತ್ರ್ಯತೆಗಳಿವೆ. ತಮ್ಮ ವ್ಯಾಪಾರ ವಹಿವಾಟಿನ ತೆವಲಿಗೆ ಅಥವಾ ರಾಜಕೀಯ ತೆವಲಿಗೆ ಶ್ರೀಮಂತ ಕೊಡವ ಸಂಸ್ಕೃತಿಯನ್ನು ಬಲಿಕೊಡುವುದು ಬೇಡ. ಹಾಗೇ ಕೊಡವ ಸಾಂಪ್ರದಾಯಿಕ ಆಟ್ ಪಾಟ್ ಕೂಡ ಒಂದೊಂದು ದೈವಿಕ ಹಿನ್ನಲೆಗಳಿದ್ದು ಇದನ್ನು ಕಂಡ ಕಂಡಲ್ಲಿ ಪ್ರದರ್ಶನ ಮಾಡುವುದು ಕೂಡ ನಿಲ್ಲಬೇಕಿದೆ.

ಮುಂದಿನ ದಿನಗಳಲ್ಲಿ ಇದು ಹೀಗೆ ಮುಂದುವರೆದರೆ ಅಂತಹ ಹೋಂ ಸ್ಟೇ ರೆಸಾರ್ಟ್ ಸೇರಿದಂತೆ ಹೋಟೆಲ್’ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಿದ್ದರೆ ಅದಕ್ಕೆ ಆಯಾಯ ಹೋಂ ಸ್ಟೇ ರೆಸಾರ್ಟ್ ಮಾಲಿಕರೇ ನೇರ ಹೊಣೆಗಾರರಾಗುತ್ತಾರೆ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ. ಈಗಾಗಲೇ ಮುಕ್ತವಾಗಿ ಹಲವಾರು ಬಾರಿ ಹಲವಾರು ವಿಷಯಗಳಲ್ಲಿ ಮನವಿ ಮಾಡಿಕೊಂಡಿದ್ದರು ಏನು ಪ್ರಯೋಜನ ಆಗಿಲ್ಲ.

ಕೂಡಲೇ Coorg wilderness resort ಸಂಬಂಧಿಸಿದವರು ಕೊಡವ ಜನಾಂಗದ ಕ್ಷಮೆ ಕೇಳಬೇಕು ಹಾಗೂ ನಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ನಿಮ್ಮ ವ್ಯವಹಾರಕ್ಕಾಗಿ ಬಳಸಿಕೊಳ್ಳುವುದು ನಿಲ್ಲಬೇಕು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಎಚ್ಚರಿಸಿದ್ದಾರೆ.

Latest Indian news

Popular Stories