ಚಾಲಕ ಸತೀಶ್ ನ ಪ್ರಾಮಾಣಿಕ ನಡೆಗೆ ಚಾಲಕ ಸಂಘದಿಂದ ಪ್ರಶಂಸೆ; ಆಟೋ ಬಾಡಿಗೆ ರೂ. 40 ಬದಲಿಗೆ ರೂ. 34 ಸಾವಿರ ಗೂಗಲ್ ಪೇ ಮಾಡಿದ ಪ್ರಯಾಣಿಕ

ಆಟೋ ರಿಕ್ಷಾದಲ್ಲಿ ಪ್ರಯಾಣಿಕರೊಬ್ಬರು ತಾನು ಪ್ರಯಾಣಿಸಿದ 2 ಕಿ.ಮೀ. ಅಂತರದ ಪ್ರಯಾಣಕ್ಕೆ ರೂ. 40 ಪವಾತಿಸಬೇಕಾದವರು, ತಮಗರಿವಿಲ್ಲದೇ ಗೂಗಲ್ ಪೇ ಮಾಡಿದ್ದ ರೂ. 34 ಸಾವಿರ ಹಣವನ್ನು ಹಿಂತಿರುಗಿಸುವ ಮೂಲಕ ಮಡಿಕೇರಿಯ ಆಟೋ ಚಾಲಕ ಸತೀಶ್ ಹಾಗೂ ಆಟೋ ಮಾಲೀಕರ, ಚಾಲಕರ ಸಂಘದವರು ಪ್ರಾಮಾಣಿಕತೆ ಮೆರೆದಿದ್ದಾರೆ.
ದಿನಾಂಕ 11ರಂದು ಎಮ್ಮೆಮಾಡು ನಿವಾಸಿ ಆಲಿ ಎಂಬುವವರು ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿಯಿಂದ ಆಟೋ ಏರಿದ್ದು ಸಬ್ ರಿಜಿಸ್ಟ್ರಾರ್ ಕಛೇರಿ ಬಳಿ ಇಳಿದಿದ್ದಾರೆ. ಅವರು ಆಟೋ ಬಾಡಿಗೆಯ ಹಣ ರೂ. 40 ನೀಡಬೇಕಿತ್ತು. ಆದರೆ ಅವರ ಕೈಯಲ್ಲಿ ಹಣವಿರದ ಕಾರಣ ಬಾಡಿಗೆಯ ಹಣ ಸೇರಿಸಿ ರೂ. 500 ಗೂಗಲ್ ಪೇ ಮಾಡುವುದಾಗಿ ಹೇಳಿ ಬಾಡಿಗೆ ಹಣ ಕಳೆದು ಉಳಿದ 460 ರೂಪಾಯಿ ಕ್ಯಾಶ್ ನೀಡುವಂತೆ ಕೇಳಿಕೊಂಡಿದ್ದಾರೆ. ತನ್ನ ಬಳಿ ಅಷ್ಟು ಹಣ ಇಲ್ಲದಿರುವುದರಿಂದ ರೂ. 340 ಗೂಗಲ್ ಪೇ ಮಾಡುವಂತೆ ಹೇಳಿದ ಚಾಲಕ ಸತೀಶ್, ರೂ. 300 ಕೊಟ್ಟಿದ್ದಾರೆ. ಆದರೆ ಆಲಿಯವರು 340 ರೂ. ಗಳನ್ನು ಗೂಗಲ್ ಪೇ ಮಾಡುವ ಬದಲಾಗಿ ತನಗೆ ಅರಿವಿಲ್ಲದೆ 34,000 ರೂ. ಗಳನ್ನು ಚಾಲಕನ ಸ್ಕ್ಯಾನರ್ ಗೆ ಸ್ಕ್ಯಾನ್ ಮಾಡಿದ್ದಾರೆ. ನಂತರ ಇದ್ಯಾವುದರ ಅರಿವಿಲ್ಲದೆ ಇಬ್ಬರೂ ಅವರವರ ಪಾಡಿಗೆ ಹೊರಟು ಹೋಗಿದ್ದಾರೆ.
ಇದಾದ ಸ್ವಲ್ಪ ಹೊತ್ತಿನ ಬಳಿಕ ಟ್ರಾನ್ಸಾಕ್ಷನ್ ಪರಿಶೀಲಿಸಿದ ಚಾಲಕ ಸತೀಶ್ ರವರಿಗೆ ವಿಷಯ ಗಮನಕ್ಕೆ ಬಂದಿದೆ. ಹೆಚ್ಚು ಹಣ ಜಮೆ ಮಾಡಿದ ಆಲಿಯವರನ್ನು ಸಂಪರ್ಕಿಸಲು ಯಾವುದೇ ಸಂಪರ್ಕ ಸಂಖ್ಯೆ ಸ್ಕ್ಯಾನರ್ ನಲ್ಲಿ ಕೂಡ ಸಿಗದ ಕಾರಣ ಅವರನ್ನು ಸಂಪರ್ಕಿಸಲು ಕಷ್ಟವಾಗಿತ್ತು. ಹಾಗೆಯೇ ಹೆಚ್ಚುವರಿ ಹಣ ನೀಡಿದ ಆಲಿಯವರಿಗೆ ತಾ. 12 ರ ಮಧ್ಯಾಹ್ನದವರೆಗೂ ವಿಷಯ ಗಮನಕ್ಕೆ ಬಂದಿರಲಿಲ್ಲ ಬ್ಯಾಂಕಿಗೆ ಬಂದು ಪಾಸ್ ಪುಸ್ತಕವನ್ನು ಪರಿಶೀಲಿಸಿದಾಗ 34,000 ರೂ. ಗಳನ್ನು ಹಿಂದಿನ ದಿನ ಆಟೋ ಚಾಲಕನಿಗೆ ನೀಡಿರುವುದು ಗೋಚರಿಸಿದೆ. ಈ ಕುರಿತು ಆಟೋ ಮಾಲೀಕರ, ಚಾಲಕರ ಸಂಘಕ್ಕೆ ಮಾಹಿತಿ ನೀಡಿದ ಮೇರೆಗೆ ಸಂಘದ ಮುಖೇನ ಮಾಹಿತಿಯನ್ನು ಗ್ರೂಪ್ ನಲ್ಲಿ ಶೇರ್ ಮಾಡಲಾಗಿತ್ತು. ಇತರೆ ಚಾಲಕರು ತಾ. 11ರಂದು ನಡೆದ ಘಟನೆಯ ಬಗ್ಗೆ ಚಾಲಕ ಸತೀಶ್ ತಮ್ಮ ಬಳಿ ತಿಳಿಸಿರುವುದಾಗಿ ಸಂಘದವರಲ್ಲಿ ಮಾಹಿತಿ ನೀಡಿದ್ದಾರೆ.
ಸಂಘದಿಂದ ಚಾಲಕ ಸತೀಶ್ ರವರನ್ನು ಸಂಪರ್ಕಿಸಿ ಘಟನೆಯ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿದೆ. ತಾ. 11ರಂದೇ ಆಲಿರವರ ಖಾತೆಗೆ 1 ರೂ. ಗೂಗಲ್ ಪೇ ಮಾಡಿ ಅವರದ್ದೇ ಖಾತೆ ಎಂಬ ಬಗ್ಗೆ ಖಾತರಿ ಪಡಿಸುವಂತೆ ಮೆಸೇಜ್ ಮಾಡಿರುವುದಾಗಿ ಚಾಲಕ ಸತೀಶ್ ಸ್ಪಷ್ಟಪಡಿಸಿದ್ದಾರೆ. ಆದರೆ ಆಲಿ ಅವರು ಅದನ್ನು ಗಮನಿಸಿರಲಿಲ್ಲ. ತಾ. 12 ರಂದು ಚಾಲಕ ಸತೀಶ್ ರವರು ಆಲಿರವರಿಗೆ ಸಂಘದ ಮಧ್ಯಸ್ಥಿಕೆಯಲ್ಲಿ ಹಣವನ್ನು ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ಹಣ ಕಳೆದುಕೊಂಡಿದ್ದ ಆಲಿ ಅವರು ಸಂಘದ ಈ ಸೇವೆಯನ್ನು ಮೆಚ್ಚಿ ಸಂಘಕ್ಕೆ ಧನ ಸಹಾಯ ನೀಡಲು ಮುಂದಾದರು. ಆದರೆ ಇದಕ್ಕೆ ಸಂಘವು ನಿರಾಕರಿಸಿರುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ದಿನು ಬಾರನ ಅವರು ಕ್ಯೂಟ್ ಕೂರ್ಗ್ ನ್ಯೂಸ್ ಗೆ ತಿಳಿಸಿದ್ದಾರೆ.
ಇಂತಹ ಪ್ರಾಮಾಣಿಕ ಸೇವೆಯ ಪ್ರತಿಫಲವಾಗಿ ಆಟೋ ಚಾಲಕರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿರುವುದು ದೊಡ್ಡ ಕೊಡುಗೆಯಾಗಿದೆ. ಯಾವುದೇ ವಸ್ತು ಆಗಿರಲಿ, ಕಳೆದುಕೊಂಡವರು ಯಾರೇ ಆಗಿರಲಿ ವಾಸ್ತವ ಅರಿತಲ್ಲಿ ಈ ರೀತಿ ಸಹಕರಿಸಲು ಸಂಘ ಸದಾ ಸಿದ್ಧವಾಗಿರುತ್ತದೆ ಎಂದು ತಿಳಿಸಿರುವ ಅವರು, ಇತರೆ ಚಾಲಕರಿಗೆ ಮಾದರಿಯಾಗಿ ಪ್ರಾಮಾಣೀಕತೆ ಮೆರೆದ ಆಟೋ ಚಾಲಕ ಸತೀಶ್ ರವರಿಗೆ ಸಂಘದ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.