ಕೊಡಗು ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ಹನೀಫ್ ನೇಮಕ

ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷರಾಗಿ ಪಿ.ಎ. ಹನೀಫ್ ಪುನರ್ ನೇಮಕಗೊಂಡಿದ್ದಾರೆ. ಹನೀಫ್ ಅವರು ಅಧ್ಯಕ್ಷರಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಹೆಸರನ್ನು ಎಐಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಇಮ್ರಾನ್ ಪ್ರತಾಪ್ಗರ್ಹಿ ಅನುಮೋದನೆಗೊಳಿಸಿದ್ದಾರೆ ಎಂದು ಎಐಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಷ್ಟ್ರೀಯ ಸಂಯೋಜಕರು ಮತ್ತು ಕರ್ನಾಟಕ ಉಸ್ತುವಾರಿಗಳಾದ ಜೀನಾಲ್ ಎನ್. ಗಾಲ ತಮ್ಮ ನೇಮಕಾತಿ ಪತ್ರದಲ್ಲಿ ತಿಳಿಸಿದ್ದಾರೆ.

ಪಿ. ಎ. ಹನೀಫ್ ಅವರನ್ನು ಕಳೆದ ಆಗಸ್ಟ್ ನಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಘಟಕ ಸೇರಿದಂತೆ ಎಲ್ಲಾ ಜಿಲ್ಲಾ ಮತ್ತು ಬ್ಲಾಕ್ ಸಮಿತಿಗಳನ್ನು ವಿಸರ್ಜನೆಗೊಳಿಸಲಾಗಿತ್ತು. ಈ ಕಾರಣದಿಂದ ಹನೀಫ್ ಅವರನ್ನು ಇದೀಗ ಮತ್ತೆ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.

1998ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ರಾಜಕಾರಣಕ್ಕೆ ಪ್ರವೇಶಿಸಿದ ಹನೀಫ್ ಅವರು,ರಾಜೀವ್ ಗಾಂಧಿ ಯುವ ಶಕ್ತಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಕೊಡಗು ಮುಸ್ಲಿಂ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ ಅದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹನೀಫ್ ಅವರು, 2014ರಲ್ಲಿ ಬಿಳುಗುಂದ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 2015ರಲ್ಲಿ ನಡೆದ ಗ್ರಾ. ಪಂ. ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಳುಗುಂದ ಗ್ರಾ. ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ 2020ರಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲೂ 2ನೇ ಬಾರಿಗೆ ಸದಸ್ಯರಾಗಿ ಚುನಾಯಿಸಲ್ಪಟ್ಟಿದ್ದಾರೆ.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ, ಕೊಡಗು ಮುಸ್ಲಿಂ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹನೀಫ್, ಈ ಹಿಂದೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾಗಿಯೂ ಹನೀಫ್ ಅವರು ಕಾರ್ಯನಿರ್ವಹಿಸಿದ್ದರು. ಹನೀಫ್ ಅವರು ವಿರಾಜಪೇಟೆ ಸಮೀಪದ ನಲ್ವತ್ತೋಕ್ಲು ಗ್ರಾಮದ ಪಟ್ಟಿಯಡ ಆಲಿ ದಂಪತಿಯ ಪುತ್ರರಾಗಿದ್ದಾರೆ.

Latest Indian news

Popular Stories