ಗೋಣಿಕೊಪ್ಪಲು, ಸೆ. 05: ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ನಿರ್ವಹಿಸಬೇಕಾದ ವಿವಿಧ ಗುತ್ತಿಗೆ ಕಾಮಗಾರಿಗಳನ್ನು ಸೆಸ್ಕನ ಪವರ್ ಮ್ಯಾನ್ ವೊಬ್ಬರು ನೇರವಾಗಿ ಮಾಡುತ್ತಿದ್ದಾರೆ. ಇದರಿಂದ ಅನುಮತಿ ಪಡೆದ ಗುತ್ತಿಗೆದಾರರಿಗೆ ಮತ್ತು ಸರಕಾರಕ್ಕೆ ಮಾಡುವ ಮೋಸವಾಗುತಿದ್ದು, ಈ ಕುರಿತು ಸಂಬಂಧಿತ ಪವರ್ ಮ್ಯಾನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಪೊನ್ನಂಪೇಟೆ ತಾಲೂಕು ಸಮಿತಿ, ಗೋಣಿಕೊಪ್ಪಲಿನ ಸೆಸ್ಕ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಿಗೆ (ಎ.ಇ.ಇ.) ಲಿಖಿತ ದೂರು ನೀಡಿದೆ.
ಈ ಕುರಿತು ಸಮಿತಿಯ ಅಧ್ಯಕ್ಷರ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಕೋಶಾಧಿಕಾರಿ ಎಂ. ಬಿ. ತಿಮ್ಮಯ್ಯ, ಗೋಣಿಕೊಪ್ಪಲು ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಚ್. ಆರ್. ಉಮೇಶ್ ಎಂಬುವರು ಅವರ ಕರ್ತವ್ಯ ವ್ಯಾಪ್ತಿಯನ್ನು ಬಿಟ್ಟು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ಮಾಡಬೇಕಾದ ವಿವಿಧ ಗುತ್ತಿಗೆ ಕೆಲಸಗಳನ್ನು ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸಿ ಅವರೇ ನಿರ್ವಹಿಸುತ್ತಿದ್ದಾರೆ. ಗೋಣಿಕೊಪ್ಪಲು ಸಮೀಪದ ಅರವತ್ತೋಕ್ಲು ಗ್ರಾಮದ ಮೊಬೈಲ್ ಟವರೊಂದರ ಪಕ್ಕದಲ್ಲಿದ್ದ ವಿದ್ಯುತ್ ಕಂಬವನ್ನು ಉಮೇಶ್ ಅವರೇ ಗುತ್ತಿಗೆ ಪಡೆದು ಸ್ಥಳಾಂತರಿಸಿದ್ದಾರೆ. ಇದಲ್ಲದೆ ಗೋಣಿಕೊಪ್ಪಲು ಬೈಪಾಸ್ ರಸ್ತೆಯ ಕೀರೆ ಹೊಳೆಯ ಬಳಿ ಹೊಸ ಸೇತುವೆಯ ಪಕ್ಕದಲ್ಲಿ ಹೊಸ ಕಂಬವನ್ನು ಹಾಕುವ ಕಾಮಗಾರಿಯನ್ನು ಇವರೇ ನಿರ್ವಹಿಸಿದ್ದಾರೆ ಎಂದು ದೂರಿದ್ದಾರೆ.
ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಿಬ್ಬಂದಿಗಳು ಈ ರೀತಿಯಾದ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುವುದು ಕಾನೂನುಬಾಹಿರವಾಗಿದೆ. ಸರಕಾರದಿಂದ ಸಂಬಳ ಪಡೆಯುವ ಇವರು ಹಣದಾಸೆಗಾಗಿ ಗ್ರಾಹಕರೊಂದಿಗೆ ಶಾಮಿಲಾಗಿ ಗುತ್ತಿಗೆದಾರರು ಮಾಡಬೇಕಾದ ಕೆಲಸಗಳನ್ನು ಇವರೇ ಮಾಡುವುದರಿಂದ ಸರ್ಕಾರಕ್ಕೆ ಮತ್ತು ಗುತ್ತಿಗೆದಾರರಿಗೆ ವಂಚನೆಯಾಗುತ್ತಿದೆ. ಈ ರೀತಿಯ ದಂಧೆಯಿಂದಾಗಿ ವಿವಿಧ ಕಾಮಗಾರಿಗಳಿಗಾಗಿ ನಿಯಮಾನುಸಾರ ಪಾವತಿಯಾಗಬೇಕಿರುವ ಹಣ ಇಲಾಖೆಗೆ ಪಾವತಿಯಾಗುತ್ತಿಲ್ಲ. ಇಲಾಖೆಯ ಕಾನೂನನ್ನು ಗಾಳಿಗೆ ತೂರಿ ಕಾಮಗಾರಿ ಮಾಡುತ್ತಿರುವ ಇಲಾಖೆಯ ಈ ಸಿಬ್ಬಂದಿ ಸರಕಾರದ ಬೊಕ್ಕಸಕ್ಕೆ ಸೇರಬೇಕಿದ್ದ ಹಣವನ್ನೆಲ್ಲ ಅವರೇ ವಸೂಲಿ ಮಾಡುತ್ತಿದ್ದಾರೆ. ಆದರಿಂದ ಸೆಸ್ಕನ ಹಿರಿಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಿಮ್ಮಯ್ಯ ಆಗ್ರಹಿಸಿದ್ದಾರೆ.
ಹಿಂದೆಯೂ ಗೋಣಿಕೊಪ್ಪಲಿನಲ್ಲಿ ಇಲಾಖೆಯ ಕೆಲ ಸಿಬ್ಬಂದಿಗಳು ಕಾನೂನುಬಾಹಿರವಾಗಿ ವಿವಿಧ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸಿದ ಬಗ್ಗೆ ವಿದ್ಯುತ್ ಗುತ್ತಿಗೆದಾರ ಸಂಘದಿಂದ ದೂರು ನೀಡಲಾಗಿತ್ತು. ಈ ಕುರಿತು ಅಂದಿನ ಅಧಿಕಾರಿಗಳು ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದಿರುವುದರಿಂದ ಸಿಬ್ಬಂದಿಗಳ ಕಾನೂನುಬಾಹಿರ ಗುತ್ತಿಗೆ ಕಾಮಗಾರಿಗಳು ಇದೀಗ ಮರುಕಳಿಸುವಂತಾಗಿದೆ. ಅದ್ದರಿಂದ ಸೆಸ್ಕನ ಕಾರ್ಯಪಾಲಕ ಅಭಿಯಂತರು ಗೋಣಿಕೊಪ್ಪಲಿನ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲಾಖೆಯ ನಿಯಮಾವಳಿಯನ್ನು ಗಾಳಿಗೆ ತೂರುತ್ತಿರುವ ಪವರ್ ಮ್ಯಾನ್ ಉಮೇಶ್ ನನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿರುವ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪೊನ್ನಂಪೇಟೆ ತಾಲೂಕು ಸಮಿತಿ, ಸರ್ಕಾರದ ಮತ್ತು ಸಾರ್ವಜನಿಕರ ಹಿತಾದೃಷ್ಟಿಯಿಂದ ಗುತ್ತಿಗೆದಾರ ಸಂಘ ನೀಡಿರುವ ಈ ದೂರನ್ನು ನಿರ್ಲಕ್ಷಿಸಿದರೆ ಮುಂದೆ ಜಿಲ್ಲಾ ಸಂಘದ ಸಹಕಾರದೊಂದಿಗೆ ಮಡಿಕೇರಿಯ ಸೆಸ್ಕ್ ನ ಕಾರ್ಯಪಾಲಕ ಅಭಿಯಂತರ ಕಚೇರಿಯ ಮುಂದೆ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದೆ.