ಕೊಡಗು: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯ ಮೇಲೆ ದಾಳಿ ಮಾಡಲು ಮುಂದಾದ ಕಾಡಾನೆ

ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನ ಮೇಲೆ ಕಾಡಾನೆ ದಾಳಿ ಮಾಡಲು ಯತ್ನಿಸಿರುವ ಘಟನೆ ಇಂದು ಬೆಳಗ್ಗೆ 7.20ರ ಸಮಯದಲ್ಲಿ ವಿರಾಜಪೇಟೆ ತಾಲೂಕು, ಚಂಬೆಬೆಳ್ಳೂರು ಗ್ರಾಮದ ಪುದುಕೋಟೆ ಭದ್ರಕಾಳಿ ದೇವಾಲಯದ ಕೆಳಗಿನ ಸಿಮೆಂಟ್ ರಸ್ತೆಯಲ್ಲಿ ನಡೆದಿರುವ ಕುರಿತು ವರದಿ ಯಾಗಿದೆ.

ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಜಿ.ಟಿ. ಚಂಗಪ್ಪ ಎಂಬುವವರು ಕಾಲೇಜಿಗೆ ತೆರಳಲು ಬಸ್ ಗಾಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದಿಢೀರ್ ಎದುರಾದ ಕಾಡನೆ ಆತನನ್ನು ಬೆನ್ನಟ್ಟಿದೆ. ಚಂಗಪ್ಪ ಓಡಿ ಕಾಡಾನೆಯ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಓಡುವ ಸಂದರ್ಭ ಸಿಮೆಂಟ್ ರಸ್ತೆಗೆ ಬಿದ್ದು ಗಾಯಗಳು ಉಂಟಾಗಿವೆ ಅಲ್ಲದೇ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದೆ. ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಆತನನ್ನು ವಿರಾಜಪೇಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ.
ಗ್ರಾಮಸ್ಥರ ಬೇಡಿಕೆ

ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಮರಿ ಆನೆಗಳೊಂದಿಗೆ ಮೂರಕ್ಕೂ ಹೆಚ್ಚು ಆನೆಗಳು ಈ ಭಾಗದಲ್ಲಿ ಸಂಚರಿಸುತ್ತಾ ಜನರಿಗೆ ಭೀತಿಯನ್ನು ಹುಟ್ಟಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಇಲ್ಲಿರುವ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಆಗಬೇಕೆಂದು ಗ್ರಾಮಸ್ಥರು ಸಂಬಂಧಿಸಿದವರನ್ನು ಒತ್ತಾಯಿಸಿದ್ದಾರೆ.

Latest Indian news

Popular Stories