ಜಮ್ಮಾಬಾಣೆ ಭೂಮಿ ಸರ್ವೆ ಮಾಡಿ, ಪಹಣಿ ಒದಗಿಸಲು ಮುಂದಾಗಿ: ಕೃಷ್ಣ ಬೈರೇಗೌಡ

ಜಿಲ್ಲೆಯಲ್ಲಿ ಹಲವು ದಶಕಗಳಿಂದ ಜಮ್ಮಾಬಾಣೆ ಭೂಮಿ ಸರ್ವೆ ಮಾಡಲು ಬಾಕಿ ಇದ್ದು, ಆ ನಿಟ್ಟಿನಲ್ಲಿ ಸಾಗುವಳಿ ಮಾಡುವವರಿಗೆ ಆರ್‍ಟಿಸಿ(ಪಹಣಿ) ಮಾಡಿಕೊಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಳ್ಳಲು ಮುಂದಾಗುವಂತೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸುದೀರ್ಘವಾಗಿ ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದರು.

‘ಜಮ್ಮಾ ಭೂಮಿ ಹಿಡುವಳಿದಾರರಿಗೆ ಆರ್‍ಟಿಸಿ ಇಲ್ಲದಿರುವುದರಿಂದ ಸಾಲ ಸೌಲಭ್ಯ ಹಾಗೂ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೃಷಿ ಮಾಡುವ ಕುಟುಂಬದವರಿಗೆ ಆರ್‍ಟಿಸಿ ಮಾಡಿಕೊಡಬೇಕಿದ್ದು, ಆ ನಿಟ್ಟಿನಲ್ಲಿ ಸರ್ವೇ ಕಾರ್ಯವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

‘ಕೊಡಗು ಜಿಲ್ಲೆಯಲ್ಲಿ 25 ಸಾವಿರ ಜನರು ಜಮ್ಮಬಾಣೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಪಟ್ಟೆದಾರ ಕುಟುಂಬದ ಒಬ್ಬರ ಹೆಸರಿಗೆ ಮಾತ್ರ ಭೂಮಿ ಇದ್ದು, ಆ ಕುಟುಂಬದ ಇತರರಿಗೂ ಆರ್‍ಟಿಸಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸರ್ವೇ ಕಾರ್ಯ ಕೈಗೊಳ್ಳುವಂತೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ನಿರ್ದೇಶನ ನೀಡಿದರು.’

ಜಮ್ಮಾಬಾಣೆ ಭೂಮಿ ಸಂಬಂಧ ತಕರಾರು ಇಲ್ಲದಿದ್ದಲ್ಲಿ ನೇರವಾಗಿ ಸರ್ವೆ ಮಾಡಬಹುದಾಗಿದೆ. ತಕರಾರು ಇದ್ದಲ್ಲಿ ಗ್ರಾಮ ಸಭೆಯಲ್ಲಿ ಇಟ್ಟು ಗ್ರಾಮಸ್ಥರ ಸಹಕಾರ ಪಡೆಯಬಹುದಾಗಿದೆ ಎಂದು ಕೃಷ್ಣ ಬೈರೇಗೌಡ ಅವರು ಸಲಹೆ ಮಾಡಿದರು.

ಇದೊಂದು ಆಂದೋಲನ ರೂಪದಲ್ಲಿ ಕೈಗೊಳ್ಳಬೇಕಿದ್ದು, ತಹಶೀಲ್ದಾರರು ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ತಂಡವು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದರು.
ಸರ್ವೇ ಮಾಡಲು ಆಧುನಿಕ ಉಪಕರಣಗಳನ್ನು ಒದಗಿಸಲಾಗುವುದು. ಪರವಾನಗಿ ಇರುವ ಸರ್ವೇ ಮಾಪಕರನ್ನು ಬಳಸಿಕೊಂಡು ಸರ್ವೇ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸಲಹೆ ಮಾಡಿದರು.

‘ಜಮ್ಮಾ ಭೂಮಿಯನ್ನು ಸರ್ವೇ ಮಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸುವ ಸಂಬಂಧ ಡ್ರಾಪ್ಟ್ ಸಿದ್ಧಪಡಿಸಿ ಕಳುಹಿಸಿಕೊಡಬೇಕು, ನಂತರ ಸರ್ಕಾರದಿಂದ ಆದೇಶ ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದರು.’ಹೆಚ್ಚಿನ ಸರ್ವೇಯರ್‍ಗಳನ್ನು ಒದಗಿಸುವುದರ ಜೊತೆಗೆ ಆಧುನಿಕ ಪರಿಕರಗಳನ್ನು ಒದಗಿಸಲಾಗುವುದು. ಆ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂದರು.

ಕಂದಾಯ ಇಲಾಖೆ ಬೇರೆ, ಸರ್ವೇ ಇಲಾಖೆ ಬೇರೆ ಎಂಬುದು ಮನಸ್ಸಿನಿಂದ ತೆಗೆದುಹಾಕಬೇಕು. ಇಬ್ಬರು ಸಹ ಜಂಟಿ ಅಭಿಯಾನ ಕೈಗೊಳ್ಳಬೇಕು ಎಂದರು.ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ತಹಶೀಲ್ದಾರರು, ಉಪ ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು, ಹೀಗೆ ಎಲ್ಲರೂ ತಂಡವಾಗಿ ಕೆಲಸ ಮಾಡಿದರೆ ಮಾತ್ರ ಸಮಸ್ಯೆಯನ್ನು ಬಗೆ ಹರಿಸಬಹುದು ಎಂದರು.

ಗ್ರಾಮ ಸಭೆಯ ಸಂದರ್ಭದಲ್ಲಿ ನಡವಳಿಗೆ ಸಹಿ ಮಾಡಿಸಿಕೊಳ್ಳಬೇಕು. ಸಮಸ್ಯೆಗಳನ್ನು ಪೂರ್ಣಗೊಳಿಸಿ ಮುನ್ನಡೆಯಬೇಕು ಎಂದರು. ಸದ್ಯ ಕಾನೂನಾತ್ಮಕವಾಗಿ ಪ್ರತಿಯೊಬ್ಬರೂ ಕೆಲಸ ನಿರ್ವಹಿಸಬೇಕು ಎಂದರು.
ಕೊಡಗು ಜಿಲ್ಲೆಯ ಕೃಷಿಕರಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಪರಿಹಾರ ಕಲ್ಪಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ.

ಆ ನಿಟ್ಟಿನಲ್ಲಿ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದರು.ಭೂಮಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಿದೆ. ಆ ನಿಟ್ಟಿನಲ್ಲಿ ಕಳೆದ ಆರೇಳು ತಿಂಗಳಲ್ಲಿ ಬಾಕಿ ಸಮಸ್ಯೆಗಳನ್ನು ಇತ್ಯರ್ಥ ಮಾಡದಿರುವುದಕ್ಕೆ ನೂರಾರು ನೆಪ ಹೇಳಬಹುದು. ಸಮಸ್ಯೆ ಬಗೆಹರಿಸುವುದು ಒಂದೇ ಪರಿಹಾರ. ಆ ನಿಟ್ಟಿನಲ್ಲಿ ಅಧಿಕಾರಿಗಳು ಮನಸ್ಸು ಮಾಡಬೇಕು. ಜೊತೆಗೆ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಕೃಷ್ಣ ಬೈರೇಗೌಡ ಅವರು ಹೇಳಿದರು.

ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ಮೊದಲ ಕಂತನ್ನು ಒದಗಿಸಲಾಗಿದ್ದು, ಯಾರಾದರೂ ಬಿಟ್ಟು ಹೋಗಿದ್ದಲ್ಲಿ ಸೇರ್ಪಡೆ ಮಾಡುವಂತಾಗಬೇಕು ಎಂದು ಸಚಿವರು ಸಲಹೆ ಮಾಡಿದರು.ಬರ ಪರಿಹಾರದಲ್ಲಿ ಹಣ ಪೋಲು ಆಗಬಾರದು. ಪ್ರೂಟ್ಸ್ ಗುರುತಿನ ಚೀಟಿ ಇದ್ದಲ್ಲಿ ಒಳ್ಳೆಯದು ಎಂದರು. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ವ್ಯತ್ಯಯವಾಗದಂತೆ ಗಮನಹರಿಸಬೇಕು. 24 ಗಂಟೆಯೊಳಗೆ ಕುಡಿಯುವ ನೀರು ಪೂರೈಸಬೇಕು ಎಂದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಪಟ್ಟೆದಾರರ ಹೆಸರಿಗೆ ಭೂಮಿ ಇದ್ದಲ್ಲಿ ಅವರ ಹೆಸರಿಗೆ ಸರ್ವೆ ಮಾಡಬೇಕು. ಪಟ್ಟೆದಾರ ಕುಟಂಬದವರು ಸಾಗುವಳಿ ಮಾಡುತ್ತಿದ್ದಲ್ಲಿ ಅವರ ಹೆಸರಲ್ಲಿಯೂ ಖಾತೆ ಮಾಡಿಕೊಡಬೇಕು ಎಂದರು.

ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಜಮ್ಮಾಬಾಣೆ ಭೂಮಿ ಸರ್ವೆ ಮಾಡಿ ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಮಡಿಕೇರಿ ತಹಶೀಲ್ದಾರರ ನೂತನ ಕಚೇರಿ ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ.ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವಂತೆ ಕೋರಿದರು.ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾಕುಶಾಲಪ್ಪ ಅವರು ಮಾತನಾಡಿ ಹಲವು ದಶಕಗಳಿಂದ ಸಮಸ್ಯೆಯಾಗಿ ಉಳಿದಿರುವ ಜಮ್ಮಾ ಬಾಣೆಯನ್ನು ಸರ್ವೇ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಸರ್ವೇ ಇಲಾಖೆ ಆಯುಕ್ತರಾದ ಮಂಜುನಾಥ್ ಅವರು ಮಾತನಾಡಿ ಜಮ್ಮಾ ಬಾಣೆ ಸಂಬಂಧಿಸಿದಂತೆ ಎ.ಖರಾಬು ಜಮೀನು, ಪೈಸಾರಿ ಹಾಗೂ ಪೈಸಾರಿ ಅಲ್ಲದ ಭೂಮಿ ಮತ್ತಿತರ ಸಂಬಂಧ ಸರ್ವೇ ಮಾಡಿ ಸಾಗುವಳಿ ಕೃಷಿಕರಿಗೆ ಭೂಮಿ ಒದಗಿಸಬೇಕಿದೆ ಎಂದರು.ಆ ನಿಟ್ಟಿನಲ್ಲಿ ಪೋಡಿ ಮುಕ್ತ ಅಭಿಯಾನ ಮಾದರಿಯಲ್ಲಿ ಜಮ್ಮಾ ಭೂಮಿಯನ್ನು ಸರ್ವೇ ಮಾಡಿ ಸಾಗುವಳಿದಾರರಿಗೆ ಆರ್‍ಟಿಸಿ ಮಾಡಿಕೊಡಬೇಕಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟ್‍ರಾಜಾ ಅವರು ಮಾತನಾಡಿ ಜಮ್ಮಾ ಭೂಮಿ ಸಂಬಂಧಿಸಿದಂತೆ ಪಟ್ಟೆದಾರರ ಹೆಸರು ದಾಖಲೆಯಲ್ಲಿದ್ದು, ಜಮಾಬಂಧಿ ಪರಿಶೀಲನೆ ಮಾಡಬೇಕಿದೆ. ಪೋಡಿ ಮುಕ್ತ ಅಭಿಯಾನ ಮಾದರಿಯಲ್ಲಿ ಸರ್ವೇ ಕಾರ್ಯವನ್ನು ಕೈಗೊಳ್ಳಬೇಕಿದೆ ಎಂದರು.ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್ ಅವರು ಮಾತನಾಡಿ ಜಿಲ್ಲೆಯಲ್ಲಿ 24 ಪರವಾನಗಿ ಸರ್ವೇಯರ್‍ಗಳು ಇದ್ದು, 15 ಮಂದಿ ಸರ್ಕಾರಿ ಸರ್ವೇಯರ್‍ಗಳು ಇದ್ದಾರೆ ಎಂದರು.

ತಹಶೀಲ್ದಾರರಾದ ಪ್ರವೀಣ್ ಕುಮಾರ್ ಅವರು ಮಾತನಾಡಿ ಜಮ್ಮಾಭೂಮಿಗೆ ಸಂಬಂಧಿಸಿದಂತೆ ಸಿವಿಲ್ ವ್ಯಾಜ್ಯಗಳಿದ್ದು, ಕೆಲವು ಕಡೆ ಪರಿಹಾರ ಆಗುತ್ತವೆ. ಇನ್ನು ಕೆಲವು ಕಡೆ ಇತ್ಯರ್ಥಕ್ಕೆ ಮುಂದೆ ಬರುವುದಿಲ್ಲ ಎಂದು ಮಾಹಿತಿ ನೀಡಿದರು.‘ಭೂಸುರಕ್ಷಾ ಅಭಿಯಾನ’ವನ್ನು ವಿರಾಜಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ 31 ತಾಲ್ಲೂಕುಗಳಲ್ಲಿ ಚಾಲನೆಗೊಳ್ಳಲಿದೆ ಎಂದರು.

ಉಪ ನೋಂದಣಾಧಿಕಾರಿ ಕಚೇರಿ ದಾಖಲೆಗಳನ್ನು ಸಹ ಡಿಜಿಟಲೀಕರಣ ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ವಿರಾಜಪೇಟೆಯಲ್ಲಿಂದು ಚಾಲನೆ ನೀಡಲಾಗುತ್ತಿದೆ. ಎರಡು ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಚಾಲನೆಗೊಳ್ಳುವ ಸಾಧ್ಯತೆ ಇದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ತಹಶೀಲ್ದಾರರಾದ ಕಿರಣ್ ಗೌರಯ್ಯ, ರಾಮಚಂದ್ರ, ನವೀನ್ ಇತರರು ಹಲವು ಮಾಹಿತಿ ನೀಡಿದರು.

Latest Indian news

Popular Stories