Kodagu

ಸುಂಟಿಕೊಪ್ಪದಲ್ಲಿ ಮೃತದೇಹ ಪತ್ತೆ ಪ್ರಕರಣಕ್ಕೆ ತಿರುವು | ಮಹಿಳೆ ಸೇರಿ ಮೂವರು ಆರೋಪಿಗಳು ಬಂಧನ

ಬೆನ್ಜ್ ಕಾರು, ಮೊಬೈಲ್ಸ್ ಸೀಝ್

  • ಇತ್ತೀಚಿಗೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಪನ್ಯ ತೋಟದ ಮಾರಿಗುಡಿ ಬಳಿ ಕಾಫಿ ಗಿಡಗಳ ಮಧ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಪುರುಷನೋರ್ವನ ಮೃತದೇಹ ಪತ್ತೆಯಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಕೊಲೆ ಪ್ರಕರಣವನ್ನು ಚಾಣಕ್ಷತನದಿಂದ ಭೇದಿಸುವಲ್ಲಿ ಕೊಡಗು ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಅತ್ಯಂತ ಕ್ಲಿಷ್ಟಕರವೆನಿಸಿದ್ದ ಅಂತರ್ ರಾಜ್ಯಗಳ ಲಿಂಕ್ ಹೊಂದಿರುವ ಈ ನಿಗೂಢ ಕೊಲೆ ಪ್ರಕರಣದ ಜಾಡನ್ನು ಸಿನಿಮೀಯ ರೀತಿಯಲ್ಲಿ ಆರೋಪಿಗಳೇ ದಂಗಾಗುವ ರೀತಿಯಲ್ಲಿ ಬಯಲಿಗೆಳೆದು ಅವರನ್ನು ಕಾರಾಗೃಹ ವಾಸಕ್ಕೆ ತುತ್ತಾಗುವಂತೆ ಮಾಡಿರುವ ಪೊಲೀಸರ ನಿರಂತರ ಕಾರ್ಯಾಚರಣೆ, ಶ್ರಮ ಹಾಗೂ ಸಫಲತೆಗೆ ಹ್ಯಾಟ್ಸ್ ಅಪ್ ಅನ್ನಲೇ ಬೇಕು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡನಿಗೆ ಗತಿಕಾಣಿಸಿದ ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂವರು ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ ಹಾಗೂ ಮರ್ಸಿಡಸ್ ಬೆಂಝ್ ಕಾರು, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮೃತ ರಮೇಶ್ ಕುಮಾರನ ಎರಡನೇ ಪತ್ನಿ ನಿಹಾರಿಕ ಮತ್ತು ಆಕೆಯ ಬಾಯ್ ಫ್ರೆಂಡ್ಸ್ ಗಳಾದ
ಹರಿಯಾಣದ ಅಂಕುರ್ ರಾಣಾ ಮತ್ತು ನಿಖಿಲ್ ಎಂಬುವವರುಗಳೇ ಬಂಧಿತ ಆರೋಪಿಗಳಾಗಿದ್ದಾರೆ.

ತೆಲಂಗಾಣದ ರಮೇಶ್ ಕುಮಾರ್ ಎಂಬಾತ ಬೆಂಗಳೂರು ರಾಮಮೂರ್ತಿನಗರದಲ್ಲಿ ವಾಸವಾಗಿರುವ ಮೂಲತಃ ತೆಲಂಗಾಣದವಳಾದ ತನ್ನ ಪತ್ನಿ ಪಂತುಲ್ ನಿಹಾರಿಕ, ಹರ್ಯಾಣ ರಾಜ್ಯದ ಅಂಕುರು ರಾಣಾ ಹಾಗೂ ನಿಖಿಲ್ ಮೈರೆಡ್ಡಿ ಎಂಬುವವರಿಂದ ಕೊಲೆಗೀಡಾದವನಾಗಿದ್ದಾನೆ.

ದಿನಾಂಕ 08-10-2024 ರಂದು ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಪನ್ಯ ಎಸ್ಟೇಟ್ ಎಂಬಲ್ಲಿ ಸಂದೇಶ್ ಎಂಬುವವರ ಕಾಫಿ ತೋಟದಲ್ಲಿ ಅರ್ಧಂಬರ್ಧ ಬೆಂದಿರುವ ಗಂಡಸಿನ ಶವವನ್ನು ಕಾರ್ಮಿಕರು ನೋಡಿದ್ದು ಮಾಲೀಕರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ 103, 234 ಬಿ. ಎನ್. ಎಸ್. ರಂತೆ ಪ್ರಕರಣ ದಾಖಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೊಡಗು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಕೆ.ಎಸ್. ಸುಂದರ್ ರಾಜ್, ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಇವರ ಮಾರ್ಗದರ್ಶನದಲ್ಲಿ ಮೃತನ ಹಾಗೂ ಆರೋಪಿಗಳ ಪತ್ತೆಗಾಗಿ
ಸೋಮವಾರಪೇಟೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಮುದ್ದು ಮಾದೇವ ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಇಲಾಖೆಯ ಇನ್ನಿತರ ಅಧಿಕಾರಿಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ 16 ಜನರ ಒಟ್ಟು 4 ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಈ ತಂಡಗಳು ವಿವಧೆಡೆ ಸುಮಾರು 500 ಕ್ಕಿಂತಲೂ ಹೆಚ್ಚಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಮೊಬೈಲ್ ಕರೆಗಳ ಜಾಡು ಹಿಡಿದು 10 ದಿನ ಕಾರ್ಯಾಚರಣೆ ನಡೆಸಿ ಕಾರನ್ನು ಕೃತ್ಯಕ್ಕೆ ಬಳಸಿರಬಹುದಾದ ಸಂಶಯಾಸ್ಪದ ಮೇರೆ ಆರೋಪಿಗಳನ್ನು ಖೆಡ್ದಾಕ್ಕೆ ಕೆಡವಲಾಗಿದೆ.

ಘಟನೆಯ ಹಿನ್ನೆಲೆ

ಆರೋಪಿ ನಿಹಾರಿಕಳು ಮೃತ ರಮೇಶ್ ಕುಮಾರ್ ನನ್ನು ಮದುವೆಯಾಗಿದ್ದು, ಆಸ್ತಿ ಮಾರಾಟದಿಂದ 8 ಕೋಟಿ ಹಣ ಪಡೆಯುವ ಉದ್ದೇಶದಿಂದ ಬಾಯ್ ಫ್ರೆಂಡ್ ಹರಿಯಾಣ ಮೂಲದ ಅಂಕುರ್ ರಾಣಾನನ್ನು ದಿನಾಂಕ 01-10-2024 ರಂದು ಮತ್ತು 03-10-2024 ರಂದು ರಮೇಶ್ ಕುಮಾರ್ ನನ್ನು ಹೈದರಾಬಾದ್ ಗೆ ಬರಲು ತಿಳಿಸಿದ್ದಾಳೆ. ಡ್ರಾಪ್ ಮಾಡುವ ನೆಪದಲ್ಲಿ ಮರ್ಸಿಡಸ್ ಬೆಂಜ್ ಕಾರಿನಲ್ಲಿ ಹೊರಟು ತೆಲಂಗಾಣದ ಉಪ್ಪಲ್ – ಭುವನಗಿರಿ ಹೆದ್ದಾರಿಯಲ್ಲಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ರಮೇಶ್ ಕುಮಾರ್ ನನ್ನು ಕೊಲೆ ಮಾಡಿದ್ದಾರೆ. ನಂತರ ಅಲ್ಲಿಂದ ಇವರಿಬ್ಬರು ಕಾರಿನಲ್ಲಿ ಮೃತದೇಹವನ್ನು ಬೆಂಗಳೂರಿಗೆ ತಂದು ಹೊರಮಾವು ಎಂಬಲ್ಲಿದ್ದ ಇನ್ನೋರ್ವ ಬಾಯ್ ಫ್ರೆಂಡ್ ನಿಖಿಲ್ ಗೆ ವಿಷಯ ತಿಳಿಸಿದ್ದಾಳೆ. ನಂತರ ಅದೇ ಕಾರಿನಲ್ಲಿ ಶವವನ್ನು ಸುಂಟಿಕೊಪ್ಪ ಪನ್ಯ ತೋಟಕ್ಕೆ ತಂದು ಬೆಂಕಿಹಚ್ಚಿ ಸುಟ್ಟು ಅಲ್ಲಿಂದ ಹಿಂತಿರುಗಿದ್ದಾರೆ. ಪ್ರಕರಣದ ವಿಶೇಷ ತನಿಖಾಧಿಕಾರಿಯಾಗಿರುವ ಸೋಮವಾರಪೇಟೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಮುದ್ದು ಮಾದೇವ ಅವರು ತನಿಖೆಯನ್ನು ಮುಂದುವರೆಸಿದ್ದಾರೆ.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button