ವಿಮಾ ಕಂಪನಿ ಯುನೈಟೆಡ್ ಇಂಡಿಯಾ ಇನ್ಸೂರನ್ಸ್ ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

ಕಾರವಾರ : ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಅಪಘಾತ ವಿಮೆಯ 15 ಲಕ್ಷ ಮೊತ್ತವನ್ನು ವಾರ್ಷಿಕ ಶೇ.10ರ ಬಡ್ಡಿಯೊಂದಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಹೊನ್ನಾವರ ನಿವಾಸಿ ನರಸಿಂಹ ಸುಬ್ಬಯ್ಯ ಶೆಟ್ಟಿ ಅವರ ಮಕ್ಕಳಾದ ಧರ್ಮೇಂದ್ರ, ಲೋಕೇಶ್ ಹಾಗೂ ರೇಖಾ ತಮ್ಮ ತಂದೆ ನರಂಸಿಹ ಶೆಟ್ಟಿ ದ್ವಿಚಕ್ರ ವಾಹನದಲ್ಲಿ ಅಪಘಾತಗೊಂಡು ಹಲವು ತಿಂಗಳ ಚಿಕಿತ್ಸೆ ಪಡೆದು ಸಾವನ್ನಪ್ಪಿದ್ದು, ವಾಹನದ ವಿಮೆಯ ಪ್ರಕಾರ ವೈಯಕ್ತಿಕ ಅಪಘಾತ ವಿಮೆ ರೂ.15 ಲಕ್ಷ ರೂಪಾಯಿಗಳಿದ್ದು, ಈ ಮೊತ್ತ ಪಾವತಿಸಲು ಯುನೈಟೆಡ್ ಇಂಡಿಯಾ ಇನ್ಸೂರನ್ಸ್ ಕಂಪನಿಗೆ ವಿನಂತಿಸಿದ್ದರು. ಆದರೆ ವಿಮಾ ಕಂಪನಿ ವಿಮಾ ಮೊತ್ತ ನೀಡದಿದ್ದಾಗ ಮೃತರ ಮಕ್ಕಳು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಎಂ .ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ, ವಿಮಾ ಕಂಪನಿ ವಿರುದ್ಧ ಆದೇಶಿಸಿ, ವಿಮಾ ಮೊತ್ತ ರೂ. 15 ಲಕ್ಷ ಗಳನ್ನು ವಾರ್ಷಿಕ ಶೇ.10ರ ಬಡ್ಡಿಯೊಂದಿಗೆ ಪಾವತಿಸಲು ಹಾಗೂ ದೂರುದಾರರಿಗೆ ಪರಿಹಾರವಾಗಿ ರೂ. 90,000 ಗಳನ್ನು ಹಾಗೂ ಖರ್ಚು ವೆಚ್ಚಕ್ಕಾಗಿ ರೂ.10000 ಗಳನ್ನು ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ಸೂಚಿಸಿದೆ.

ದೂರುದಾರರ ಪರ ನ್ಯಾಯವಾದಿ ಪಿ.ಎಸ್. ಭಟ್ ಹಾಗೂ ಇನ್ಸೂರನ್ಸ್ ಕಂಪನಿ ಪರವಾಗಿ ನ್ಯಾಯವಾದಿ ಎ.ಜಿ . ಹಳದಿಪುರಕರ ವಾದ ಮಂಡಿಸಿದ್ದರು.

ವಿಮೆ ಹೆಸರಿನಲ್ಲಿ ಹೆಚ್ಚಿಗೆ ಹಣ ಪಡೆದ ನಾಗಶಾಂತಿ ಶೋರೂಂಗೆ 60 ಸಾವಿರ ರೂ. ದಂಡ

ಕಾರವಾರ : ಗ್ರಾಹಕರೊಬ್ಬರಿಂದ ಕಾರು ಖರೀದಿ ಸಂದರ್ಭದಲ್ಲಿ ವಿಮೆಯ ಹೆಸರಿನಲ್ಲಿ ಹೆಚ್ಚಿಗೆ ಹಣ ಪಡೆದ ಶೋರೂಂಗೆ 60 ಸಾವಿರ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಜಿಲ್ಲೆಯ ಕೈಗಾದ ಎನ್‌ಪಿಸಿಐಎಲ್ ಉದ್ಯೋಗಿ ಎ. ರಾಜಸೇಖರನ್, ಹುಬ್ಬಳಿಯ ನಾಗಶಾಂತಿ ಎಂಟರ್‌ಪ್ರೈಸಸ್ ಪ್ರವೇಟ್ ಲಿಮಿಟೆಡ್, ರೆನಾಲ್ಟ್ ಇಂಡಿಯಾ ಪ್ರವೇಟ್ ಲಿಮಿಟೆಡ್‌ನ ಮಾರಾಟಗಾರರ ಬಳಿ ಕಾರು ಖರೀದಿಸಿದ್ದರು. ಈ ಸಂದರ್ಭದಲ್ಲಿ ವಿಮೆ ಹಾಗೂ ಕಾರಿಗಾಗಿ ಶೋರೂಂನವರು ಹೆಚ್ಚಿಗೆ ಹಣ ಪಡೆದ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಎಂ .ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ , ಶೋರೂಂ ನವರು ಕಾರಿನ ಮೊತ್ತದಲ್ಲಿ ಹಾಗೂ ವಿಮೆಯ ಹೆಸರಿನಲ್ಲಿ ಹೆಚ್ಚಿನ ಹಣ ಪಡೆದಿರುವುದನ್ನು ಗಮನಿಸಿ, ಎದುರುದಾರರು ಸೇವಾ ನ್ಯೂನತೆಯೊಂದಿಗೆ ಅನುಚಿತ ವ್ಯಾಪಾರ ನೀತಿಯನ್ನು ಅನುಸರಿಸಿರುವುದರಿಂದ ಹುಬ್ಬಳಿಯ ನಾಗಶಾಂತಿ ಶೋರೂಂ ಹೆಚ್ಚಿಗೆ ಪಡೆದಿದ್ದ ರೂ. 9548 ಗಳನ್ನು ವಾರ್ಷಿಕ ಶೇ.12 ರ ಬಡ್ಡಿಯೊಂದಿಗೆ ಪಾವತಿಸುವುದರೊಂದಿಗೆ 60 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ದಂಡದ ಮೊತ್ತದಲ್ಲಿ ರೂ.45,000 ಗಳನ್ನು ದೂರುದಾರರಿಗೆ ಪರಿಹಾರ ನೀಡುವಂತೆ, ಇನ್ನು ಮುಂದೆ ಈ ರೀತಿಯ ತಪ್ಪುಗಳನ್ನು ಎಸಗದಂತೆ ಎಚ್ಚರಿಕೆಗಾಗಿ ರೂ.5000 ಗಳನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿಸುವಂತೆ ಹಾಗೂ ರೂ.10000 ಗಳನ್ನು ದೂರುದಾರರಿಗೆ ಪ್ರಕರಣದ ಖರ್ಚು ವೆಚ್ಚಕ್ಕಾಗಿ ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ಸೂಚಿಸಿದೆ.

ದೂರುದಾರರ ಪರ ನ್ಯಾಯವಾದಿ ವಿ.ಎ.ತೋಡುರಕರ ಹಾಗೂ ಶೋರೂಂ ಪರವಾಗಿ ಡಿ.ಆರ್.ಭಟ್ ಅವರು ವಕಾಲತ್ತು ನಡೆಸಿದ್ದರು.
…………….
….

Latest Indian news

Popular Stories