ಮಡಿಕೇರಿ:-ಕೊಡಗು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ತಡೆಯುವ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಂಬಂಧಪಟ್ಟವರ ಉಪಸ್ಥಿತಿಯಲ್ಲಿ ಮಂಗಳವಾರ ಸುದೀರ್ಘ ಚರ್ಚೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕರ್ನಲ್(ನಿವೃತ್ತ) ಸಿ.ಪಿ.ಮುತ್ತಣ್ಣ ಅವರು ಕೊಡಗು ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.
ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ನಾಗರಿಕರು ಭಯದಿಂದ ಬದುಕುವಂತಾಗಿದೆ.
ಆ ನಿಟ್ಟಿನಲ್ಲಿ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷವನ್ನು ನಿಯಂತ್ರಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಪದೇ ಪದೇ ಗ್ರಾಮಗಳಿಗೆ ಬರುವ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಸಲಹೆ ಮಾಡಿದರು.
ಟ್ರಂಚ್‍ಗಳ ನಿರ್ಮಾಣ, ಆನೆ ಓಡಾಡುವ ಮಾರ್ಗ ಸಂಬಂಧಿಸಿದಂತೆ ಎಸ್‍ಎಂಎಸ್ ಮೂಲಕ ಮಾಹಿತಿ ನೀಡುವುದು. ಎಲಿಪೆಂಟ್ ಟಾಸ್ಕ್‍ಪೋರ್ಸ್ ಮತ್ತು ರ್ಯಾಪಿಡ್ ರೆಸ್ಪಾನ್ಸ್ ತಂಡಗಳು ಎಸ್‍ಒಪಿ ಮಾದರಿಯಲ್ಲಿ ಕಾರ್ಯನಿರ್ವಹಿಸಿ ಕಾಡಾನೆಯನ್ನು ನಿಯಂತ್ರಿಸಲು ಮುಂದಾಗಬೇಕಿದೆ ಎಂದು ಮನವಿ ಮಾಡಿದರು.
ರೈಲ್ವೆ ಬ್ಯಾರಿಕೇಡ್‍ಗಳ ನಿರ್ಮಾಣ ಮಾಡಿದರೂ ಸಹ ಆನೆಗಳು ಅದನ್ನು ದಾಟಿ ಬರುತ್ತವೆ. ಈ ಸಂಬಂಧ ಇದಕ್ಕಿಂತ ಹೆಚ್ಚಿನ ಉತ್ತಮ ಮಟ್ಟದ ಕ್ರಮ ಕೈಗೊಳ್ಳುವುದು ಈ ಸಂಬಂಧ ಕ್ರಿಯಾಯೋಜನೆಯನ್ನು ತಯಾರಿಸಿ ವನ್ಯಪ್ರಾಣಿಗಳ ಹಾವಳಿ ನಿಯಂತ್ರಣ ಸಂಬಂಧ ಅಗತ್ಯ ಮುನ್ನೆಚ್ಚರ ಕ್ರಮವಹಿಸಬೇಕಿದೆ ಎಂದರು.
ಅಗತ್ಯವಿರುವ ಕಡೆ ಸೋಲಾರ್ ಲೈಟ್‍ಗಳನ್ನು ಅಳವಡಿಸುವುದು. ಹಾಡಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದು, ಸೈನ್‍ಬೋರ್ಡ್ ಮೂಲಕ ಅಗತ್ಯ ಮಾಹಿತಿಯನ್ನು ನೀಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸಿ.ಪಿ.ಮುತ್ತಣ್ಣ ಅವರು ಮನವಿ ಮಾಡಿದರು.
ಮೋಹನ್ ರಾಜ್ ಅವರು ಮಾತನಾಡಿ ಕಾಡಾನೆಗಳು ದಿನದಲ್ಲಿ ನೂರಾರು ಕಿ.ಮೀ. ಸಂಚರಿಸುತ್ತಿವೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.
ಮತ್ತೊಬ್ಬ ಪ್ರಮುಖರಾದ ಬೋಪಣ್ಣ ಅವರು ಮಾತನಾಡಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಬ್ಯಾರಿಕೇಡ್‍ಗಳ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ ಎಂದು ಸಲಹೆ ಮಾಡಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಸಿ.ಜಿ.ಕುಶಾಲಪ್ಪ ಅವರು ಮಾತನಾಡಿ ಕಾಡಾನೆ ಹಾವಳಿ ತಡೆಯುವಲ್ಲಿ ವಿಶೇಷ ನಿಗಾವಹಿಸಬೇಕಿದೆ ಎಂದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರು ಮಾತನಾಡಿ ಪೆಂಚಿಂಗ್ ಹಾಗೂ ಬ್ಯಾರಿಕೇಡ್‍ಗಳನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಕಾಡಾನೆ ಹಾವಳಿ ತಡೆಯಬಹುದಾಗಿದೆ.ಜೊತೆಗೆ ಸೋಲಾರ್ ತಂತಿ ಬೇಲಿ ಅಳವಡಿಸಬಹುದಾಗಿದೆ.
ಆ ನಿಟ್ಟಿನಲ್ಲಿ ಅಗತ್ಯ ಕ್ರಿಯಾಯೋಜನೆ ತಯಾರಿಸಲಾಗುವುದು ಎಂದರು.‘ಶನಿವಾರಸಂತೆ, ಬೆಂಡೆಬೆಟ್ಟ, ಆನೆಕಾಡು, ದುಬಾರೆ, ಸಿದ್ದಾಪುರ, ಮಾಲ್ದಾರೆ, ನಾಗರಹೊಳೆ ಈ ವ್ಯಾಪ್ತಿಯಲ್ಲಿ ಹೆಚ್ಚು ಕಾಡಾನೆಗಳು ಸಂಚರಿಸುತ್ತವೆ ಎಂದು ಮಾಹಿತಿ ನೀಡಿದರು.’
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ಅವರು ಕಾಡಾನೆಗಳು ಯಾವ ಯಾವ ಪ್ರದೇಶಗಳಲ್ಲಿ ಸಂಚಾರ ಮಾಡುತ್ತವೆ ಎಂಬುದು ಮೊದಲೆ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.
ಯಶವಂತ ಕಾಳಪ್ಪ ಅವರು ಮಾತನಾಡಿ ಕುಟ್ಟಂದಿ ಸೇರಿದಂತೆ ಇತರೆ ಕಡೆಗಳಲ್ಲಿ ಕಾಡಾನೆಯನ್ನು ಓಡಿಸುವ ಸಂದರ್ಭದಲ್ಲಿ ಆನೆಗಳು ಚದುರಿ ಹೋಗುತ್ತವೆ. ಇದರಿಂದ ಕಾಡಾನೆಗಳು ತೋಟಗಳಿಗೆ ಹೋಗುವುದು ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಕಾಡಾನೆ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರಾಮಸಭೆ ರಚಿಸಬೇಕು. ಆಕಾಶವಾಣಿ ಮೂಲಕ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಬೋಸ್ ಮಾದಪ್ಪ ಅವರು ಮಾತನಾಡಿ ಕಾಡಂಚಿನಲ್ಲಿರುವ ಗ್ರಾಮದ ಜನರಿಗೆ ಪುನರ್ ವಸತಿ ಕಲ್ಪಿಸಬೇಕು. ವನ್ಯಪ್ರಾಣಿಗಳ ಹಾವಳ ತಪ್ಪಿಸಬೇಕು ಎಂದು ಮನವಿ ಮಾಡಿದರು.ಹಾಡಿಗಳಲ್ಲಿ ಇಂದಿಗೂ ಸಹ ಅಂಗನವಾಡಿ, ಶಾಲೆ, ಆಸ್ಪತ್ರೆ ಇಲ್ಲದೆ ಬದುಕು ದೂಡುತ್ತಿದ್ದಾರೆ. ಇವರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಅವರು ಮಾತನಾಡಿ ಆರ್‍ಆರ್‍ಟಿ ಮತ್ತು ಇಟಿಎಫ್ ನ್ನು ಒಂದುಗೂಡಿಸಿ ಕಾರ್ಯನಿರ್ವಹಿಸಲು ಮುಂದಾಗಲಾಗಿದೆ ಎಂದು ಹೇಳಿದರು.ರೈತ ಸಂಘದ ಜಿಲ್ಲಾಧ್ಯಕ್ಷರಾದ ಕುಶಾಲಪ್ಪ ಅವರು ಮಾತನಾಡಿ ಕಾಡಾನೆ ಹಾವಳಿಯಿಂದಾಗಿ ಕಾಫಿ ಕೊಯ್ಯಲು ಕಾರ್ಮಿಕರು ಮುಂದೆ ಬರುತ್ತಿಲ್ಲ. ವನ್ಯಪ್ರಾಣಿಗಳ ನಿಯಂತ್ರಣ ಮಾಡಿದಾಗ ಮಾತ್ರ ಕಾರ್ಮಿಕರು ಸುರಕ್ಷಿತವಾಗಿ ಕೃಷಿ ಕೆಲಸ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು.
ಡಾ.ತಮ್ಮಯ್ಯ, ಕಾರ್ತಿಕ್, ಸಿ.ಪಿ.ಅಯ್ಯಪ್ಪ, ಕೆ.ಎಂ.ನಾಣಯ್ಯ, ಕೃಷ್ಣನ್, ರವಿಚಂಗಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ, ಇತರರು ಕಾಡಾನೆ ಹಾವಳಿ ತಡೆಯುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವು ಮಾಹಿತಿ ನೀಡಿದರು.
ವನ್ಯಪ್ರಾಣಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರ ಮಾಹಿತಿ ಪಡೆದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ವನ್ಯಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಲಾಗುವುದು.ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಗೆ ಸಮಲೋಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.