ನಾವೇ ಕಟ್ಟಿ ಬೆಳೆಸಿದ ಪಕ್ಷ ಬಿಡಲು ನಾಯಕರೇ ಕಾರಣ-ಜೆಡಿಎಸ್ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

ಮಂಡ್ಯ.10: ನಾಯಕರ ನಡವಳಿಕೆಯಿಂದ ಜಿಲ್ಲೆಯಲ್ಲಿ ನಾವೇ ಕಟ್ಟಿ ಬೆಳೆಸಿದ ಜೆಡಿಎಸ್ ಬಿಟ್ಟುಹೋದೆವು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಜೆಡಿಎಸ್ ವಿರುದ್ಧ ಹರಿಹಾಯ್ದರು.

ತಾಲೂಕಿನ ಕೊತ್ತತ್ತಿ ಎರಡನೇ ಹೋಬಳಿ ತಗ್ಗಹಳ್ಳಿ ಗ್ರಾಮದಲ್ಲಿ ನಾಡಕಚೇರಿ ಕಟ್ಟಡದ ಶಂಕು ಸ್ಥಾಪನೆ ಹಾಗೂ ಬಿಎಂಸಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್‌ನಲ್ಲೇ ಇದ್ದಿದ್ದರೆ ಬಾಬು ಸೆಸ್ಕ್‌ ಅಧ್ಯಕ್ಷರಾಗುತ್ತಿರಲಿಲ್ಲ.

2006-07ರಲ್ಲಿ ಆರಂಭವಾದ ಸೆಸ್ಕ್‌ಗೆ ಯಾರೂ ಅಧ್ಯಕ್ಷರಾಗಿರಲಿಲ್ಲ. ರಮೇಶ್ ಬಂಡಿಸಿದ್ದೇಗೌಡರ ಕುಟುಂಬ ಕ್ಷೇತ್ರದ ಸೇವೆಗಾಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್‌ನಲ್ಲಿ ನಾನು ಮಂತ್ರಿಯಾಗಿದ್ದು ಬೇರೆ, ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿಯಾಗಿರುವ ವ್ಯತ್ಯಾಸವೇ ಬೇರೆ. ಬರಗಾಲದ ಸಮಸ್ಯೆಯಲ್ಲಿ ಕುಟುಂಬ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ.

5 ಗ್ಯಾರಂಟಿ ಯೋಜನೆಗಳಿಗೆ ರಾಜ್ಯದಲ್ಲಿ 70 ಸಾವಿರ ಕೋಟಿ ಖರ್ಚು ಮಾಡುತ್ತಿದ್ದು, ಪ್ರತಿ ಮನೆಗೆ 5 ರಿಂದ 7 ಸಾವಿರ ರೂ. ಹಣ ಬರುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿಯನ್ನೂ ರಚಿಸಲಾಗಿದೆ ಎಂದರು.ತಗ್ಗಹಳ್ಳಿಯಲ್ಲಿ 30 ರಿಂದ 40 ಲಕ್ಷ ಬೆಲೆಬಾಳುವ ಜಾಗವನ್ನು ನಾಡಕಚೇರಿಗೆ ಯಜಮಾನ್ ಗುರುಮಲ್ಲಪ್ಪರವರ ಕುಟುಂಬ ಕೊಡುಗೆ ಕೊಟ್ಟಿದೆ.

ಅವರಿಗೆ ಯಾವುದೇ ಸಂದರ್ಭದಲ್ಲೂ ಗೌರಯುತವಾಗಿ ನಡೆಸಿಕೊಳ್ಳುವ ಜವಾಬ್ದಾರಿಯನ್ನು ಎಲ್ಲರೂ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಪೌತಿ ಖಾತೆ ಆರ್‌ಟಿಸಿ ಇನ್ನಿತರ ಸಮಸ್ಯೆಗಳಿಗೆ ಯಾರು ಸಹ ತಹಸೀಲ್ದಾರ್ ಕಚೇರಿಯಲ್ಲಿ ಒಂದು ರೂ.ಕೊಡಬೇಡಿ ಅಂತಹ ವಿಚಾರಗಳು ಇದ್ದರೆ ನಮಗೆ ತಿಳಿಸಿ.

ಒಂದು ವರ್ಷದಲ್ಲಿ ತಹಸಿಲ್ದಾರ್ ಕಚೇರಿಯಲ್ಲಿರುವ ಹಳೆಯ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿದರು. ಸೆಸ್ಕ್‌ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ತಗ್ಗಹಳ್ಳಿ ಗ್ರಾಮದ ನಾಡಕಚೇರಿಗೆ 40 ಲಕ್ಷ ರೂಪಾಯಿ ಬೆಲೆಬಾಳುವ ಜಾಗವನ್ನು ದಾನದ ರೂಪದಲ್ಲಿ ಕೊಟ್ಟಿರುವ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.ಕ್ಷೇತ್ರದ ಅಭಿವೃದ್ಧಿಗೆ ಬದ್ದವಾಗಿದ್ದು, 10 ಕೋಟಿ ರೂ. ವೆಚ್ಚದಲ್ಲಿ ಪಿಕಪ್ ನಾಲೆಗಳ ಅಭಿವೃದ್ಧಿ, ಶಾಲೆಗಳ ಮಂಜೂರಾತಿ, ಟಿಸಿ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ತಗ್ಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ನಿರ್ಮಿಸಿರುವ ಬಿಎಂಸಿ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಿದರು. ನಾಡಕಚೇರಿಗೆ ನಿವೇಶನ ನೀಡಿದ ದಾನಿ ತಗ್ಗಹಳ್ಳಿ ಗ್ರಾಮದ ಗುರುಮಲ್ಲಪ್ಪ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.

Latest Indian news

Popular Stories