ಬಿಜೆಪಿ ನಾಯಕರ ತಾಳಕ್ಕೆ ಜೆಡಿಎಸ್‌ ಕುಣಿತ: ಸಿಎಂ ಸಿದ್ದರಾಮಯ್ಯ ಆರೋಪ

ಮಂಡ್ಯ(ಮಾ.11): ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಬಿ.ಎಸ್‌.ಯಡಿಯೂರಪ್ಪ. ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದವರು ಅವರು. ಆದರೆ, ಇದೀಗ ಕುಮಾರಸ್ವಾಮಿ ಅದೇ ಬಿಜೆಪಿಯವರ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಮಂಡ್ಯ ವಿಶ್ವವಿದ್ಯಾಲಯ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು “ಬಿಜೆಪಿ ಅವರು ಹೇಳುವುದಕ್ಕೆಲ್ಲ ಜೆಡಿಎಸ್‌ನವರು ತಾಳ ಹಾಕುತ್ತಾರೆ. ನಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿ ಟೀಕೆ ಮಾಡಿದರೆ ಜೆಡಿಎಸ್ ಅವರು ಚಪ್ಪಾಳೆ ತಟ್ಟುತ್ತಿದ್ದಾರೆ.

ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ೨೦೧೮ರಲ್ಲಿ ಕುಮಾರಸ್ವಾಮಿ ಮನೆಗೆ ಹೋಗಿ ಕರೆದುಕೊಂಡು ಬಂದು ಮುಖ್ಯಮಂತ್ರಿ ಮಾಡಿದೆವು. ಆದರೆ, ಕುಮಾರಸ್ವಾಮಿ ವೆಸ್ಟೆಂಡ್‌ ಹೊಟೇಲ್‌ನಲ್ಲಿ ಕೂತು ಅಧಿಕಾರ ಕಳೆದುಕೊಂಡರು. ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ. ೧೭ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆದು ಕುಮಾರಸ್ವಾಮಿ ಸರ್ಕಾರವನ್ನು ಕೆಡವಿದರು. ಈಗ ಇದೇ ಕುಮಾರಸ್ವಾಮಿ ಅಂದು ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ ಜೊತೆಯೇ ಕೈಜೋಡಿಸಿದ್ದಾರೆ ಎಂದರು.

Latest Indian news

Popular Stories