ಪುಣೆಯಲ್ಲಿ ನಡೆದ ಪೋರ್ಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಆರೋಪಿ ಬಾಲಕನ ರಕ್ತದ ಮಾದರಿಯನ್ನು ತಿರುಚಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಇಲ್ಲಿನ ಸಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಬಂಧಿತರಲ್ಲಿ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರೂ ಸೇರಿದ್ದಾರೆ. ಬಂಧಿತರನ್ನು ಡಾ. ಅಜಯ್ ತಾವರೆ ಮತ್ತು ಶ್ರೀಹರಿ ಹಾರ್ನರ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ರಕ್ತ ಮಾದರಿಯನ್ನು ತಿರುಚಿ ಮತ್ತು ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ವೈದ್ಯರನ್ನು ಬಂಧಿಸಲಾಗಿದೆ’. ಸದ್ಯ ಈ ಪ್ರಕರಣವನ್ನು ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 19 ರ ಮುಂಜಾನೆ ಪುಣೆಯ ಉದ್ಯಮಿಯೊಬ್ಬರ ಅಪ್ರಾಪ್ತ ಮಗ ಚಲಾಯಿಸುತ್ತಿದ್ದ ಐಷಾರಾಮಿ ಪೋರ್ಶೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಐಟಿ ಉದ್ಯೋಗಿಗಳು ಸಾವಿಗೀಡಾಗಿದ್ದರು. ಕಾರು ಚಲಾಯಿಸುವ ವೇಳೆ ಬಾಲಕ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.