ಖಾತರಿ ಯೋಜನೆಗಳಿಗೆ ಬಜೆಟ್‌ನಲ್ಲಿ 52,009 ಕೋಟಿ ರೂ. ಅರ್ಪಣೆ : ಸಿಎಂ ಸಿದ್ದರಾಮಯ್ಯ

ಮೈಸೂರು : ಮುಂದಿನ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 52,009 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು ನಗರದಲ್ಲಿ ಆಯೋಜಿಸಿದ್ದ, ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಹಣ ಕೇಳುತ್ತಿರುವುದು ಗ್ಯಾರಂಟಿಗಳಿಗೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳುತ್ತಾರೆ.
ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಲು ಬಿಜೆಪಿಯವರಿಗೆ ನಾವು ಆಹ್ವಾನ ನೀಡಿದ್ದೇವೆ. ಗ್ಯಾರಂಟಿಗಳಿಗೆ ಒಂದು ಪೈಸೆಯನ್ನೂ ಕೊಡಬೇಡಿ. ಮುಂದಿನ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 52,009 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ ಎಂದರು.

2023-24 ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಕೊಡುತ್ತೇವೆ ಎಂದಿದ್ದರು. ಈ ವರ್ಷ ಒಂದೇ ಒಂದು ಪೈಸೆ ಬಂದಿಲ್ಲ. ಬಜೆಟ್ ನಲ್ಲಿ ಘೋಷಿಸಿದಂತೆ ಹಣ ಕೊಟ್ಟಿದ್ದೇವೆ ಎಂದು ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ. 18,171 ಕೋಟಿ ರೂ.ಗಳ ಬರಪರಿಹಾರವನ್ನು ಕೊಡಲು ಮನವಿ ಮಾಡಿ 5 ತಿಂಗಳಾಗಿದ್ದರೂ ಒಂದು ರೂಪಾಯಿ ನೀಡಿಲ್ಲ.

ರೈತರು ಕಷ್ಟದಲ್ಲಿದ್ದರೂ ಈವರೆಗೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಇದು ಸತ್ಯ. ಕರ್ನಾಟಕದ ಜನರನ್ನು ಅತ್ಯಂತ ಅಲಕ್ಷ್ಯದಿಂದ ಕಾಣುತ್ತಿದ್ದು, ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.

15ನೇ ಹಣಕಾಸಿನ ಆಯೋಗವು ನಮಗೆ ₹5,495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು, ಇದೂ ಸೇರಿ ಕೆರೆಗಳ ಅಭಿವೃದ್ಧಿ ಹಾಗೂ ಪೆರಿಫೆರಲ್ ರಿಂಗ್ ರಸ್ತೆಗೆ ಬರಬೇಕಿದ್ದ ಒಟ್ಟು 11,495 ಕೋಟಿ ರೂ.ಗಳ ಪೈಕಿ ಒಂದು ರೂಪಾಯಿ ನೀಡದೆ ಸುಳ್ಳು ಹೇಳುತ್ತಿದ್ದಾರೆ. ಅವರ ತಾಳಕ್ಕೆ ಕುಣಿಯುವ ಬಿಜೆಪಿ ಅವರದ್ದು 7 ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಾಗಿದೆ. ಅದಕ್ಕಾಗಿಯೇ ನಾವು ಸರ್ವೊಚ್ಛ ನ್ಯಾಯಾಲಯಕ್ಕೆ ಹೋಗಿದ್ದೇವೆ. ಬರ ಸಮೀಕ್ಷೆ ವರದಿ ನೀಡಿ ಒಂದು ತಿಂಗಳೊಳಗೆ ಪರಿಹಾರ ಕೊಡಬೇಕೆಂದು ಕಾನೂನಿನಲ್ಲಿದೆ, ಆದರೂ ನಮಗೆ ಪರಿಹಾರ ನೀಡಿಲ್ಲ ಎಂದರು.

Latest Indian news

Popular Stories