ಮೈಸೂರಿನಲ್ಲಿ ಭಾವೈಕ್ಯತೆಯ ಹಬ್ಬ: ಒಂದೇ ಸ್ಥಳದಲ್ಲಿ ಗಣೇಶೋತ್ಸವ, ಈದ್ ಮಿಲಾದ್ ಆಚರಣೆ

ಮೈಸೂರು, ಸೆಪ್ಟೆಂಬರ್‌ 16: ಮೈಸೂರು ನಗರದ ಸುಣ್ಣದ ಕೆರೆಯಲ್ಲಿರುವ ಶ್ರೀ ವಿನಾಯಕ ಯುವಕರ ಬಳಗ ವತಿಯಿಂದ ಗಣೇಶ ಪ್ರತಿಷ್ಠಾಪನೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದಾರೆ. ಈ ಭಾವೈಕ್ಯತೆಯ ಗಣೇಶೋತ್ಸವದಲ್ಲಿ ಈದ್ ಮಿಲಾದ್ ಕೂಡ ಆಚರಿಸಲಾಗಿದ್ದು, ಈದ್ ಮಿಲಾದ್ ಅಂಗವಾಗಿ ಮಕ್ಕಳಿಗೆ ಪುಸ್ತಕ ಹಾಗೂ ಹೋಳಿಗೆ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗಿದೆ.

ಈ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದ ಕಾಂಗ್ರೆಸ್ ಮುಖಂಡ ಜಿ ಶ್ರೀನಾಥ್ ಬಾಬು ಮಾತನಾಡಿ, ‘ನಮ್ಮ ದೇಶದಲ್ಲಿ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುತ್ತಿದ್ದು, ಪ್ರತಿ ವರ್ಷವೂ ಸಹ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಸಮೀಪ ಬಂದಿದ್ದರಿಂದ ಉಭಯ ಸಮಾಜದ ಬಾಂಧವರು ಈ ಹಬ್ಬಗಳನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆಯಿಂದ ಬಾಳುವಂತೆ’ ಕರೆ ನೀಡಿದರು.

ಶ್ರೀ ವಿನಾಯಕರ ಯುವಕರ ಬಳಗದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ‘ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ದತೆಯಿಂದ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡುವ ಯತ್ನಗಳು ನಡೆಯುತ್ತಿದೆ.

ಆದ್ದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆಯನ್ನು ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದರು.

Latest Indian news

Popular Stories