Mysoru

ಸಿದ್ದರಾಮಯ್ಯಗೆ ಕ್ಲೀನ್‌ಚಿಟ್, ಲೋಕಾಯುಕ್ತರು ಸತ್ಯ ಹೇಳಿದ್ದಾರೆ: ಜಿಟಿ ದೇವೇಗೌಡ

ಮೈಸೂರು (ಫೆ.20): ಮುಡಾ ಕೇಸಿನಲ್ಲಿ ಲೋಕಾಯುಕ್ತರು ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿದ್ದಾರೆ. ನಾನು ಇದನ್ನೇ ಹಿಂದೆಯೇ ಹೇಳಿದ್ದೆ. ನಾನು ಆ ಮಾತು ಹೇಳಿದ್ದಕ್ಕೆ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ನಾನು ಸಿದ್ದರಾಮಯ್ಯನ ಪರ ಎಂದರು.

ಈಗ ಲೋಕಾಯುಕ್ತ ಪೊಲೀಸರೇ ಕ್ಲೀನ್‌ಚಿಟ್ ಕೊಟ್ಟಿದ್ದಾರೆ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದರು.

ಮುಡಾ ಕೇಸ್‌ ವಿಚಾರ ಸಂಬಂಧ ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾಮೈದನ ಕೇಸ್‌ಗೂ, ಸಿದ್ದರಾಮಯ್ಯಗೂ ಏನ್ ಸಂಬಂಧ? ಆತ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿಯೇನೂ ಅಲ್ಲ. ಭೂಮಿ ತೆಗೆದುಕೊಳ್ಳುವಾಗ ಪಹಣಿ,ಪಟ್ಟ ನೋಡಿ ತಗೊಳ್ಳುತ್ತಾರೆ. ಈಗ 50-50 ಯೋಜನೆಯಲ್ಲಿ ಲೇಔಟ್ ಮಾಡದೆ ಹೋದ್ರೆ ಅವರಿಗೆ ಸಂಬಳಕ್ಕೆ ಕಾಸು ಇರೋದಿಲ್ಲ. 50-50 ರಾಜ್ಯದಲ್ಲೇ ನಡಿತಿರೋದೇ ಎಂದರು.

ದೂರುದಾರ ಯಾರೇ ಆಗಿರಲಿ, ಅವರು ಒಂದು ಪತ್ರ ಸಿಕ್ಕಿದ ತಕ್ಷಣ ದೂರು ಕೊಟ್ಟಿದ್ದಾರೆ. ಒಂದು ಎಫ್‌ಐಆರ್ ಆದ ಕೂಡಲೇ ಅಧಿಕಾರದಲ್ಲಿ ಇರೋರನ್ನ ರಾಜೀನಾಮೆ ಕೊಡಿ ಅಂತ ಹೇಳೋದೇ ಆಯ್ತು. ನನ್ನ ಅಕ್ಕನ ಮಗ ಪಡೆದಿರುವ ನಿವೇಶಗಳಿಗೂ ನನಗೂ ಸಂಬಂಧ ಇಲ್ಲ. ಸಂಬಂಧ ಇದೇ ಅಂತ ಇಟ್ಟುಕೊಳ್ಳಿ. ಕಾನೂನು ಬದ್ಧವಾಗಿ ಇದೆಯೋ ಇಲ್ವೋ ಚೆಕ್ ಮಾಡಿ ಹೇಳಿ.

ಸಿಎಂ ಭಾಮೈದ ಎಂಬ ಕಾರಣಕ್ಕೆ ದೊಡ್ಡ ಆಂದೋಲನ ಮಾಡಿದ್ದಾರೆ. ಪ್ರತಿಯೊಬ್ಬರೂ ರಾಜೀನಾಮೆ ಕೇಳುವಾಗ ಸಿಎಂ ರಾಜೀನಾಮೆ ಕೊಡುವ ಅಗತ್ಯ ಇಲ್ಲ ಅಂತ ನಾನು ಹೇಳಿದ್ದೆ. ಎಲ್ಲ ಪಕ್ಷದವರ ಮೇಲೂ ಎಫ್‌ಐಆರ್ ಇದೆ. ಹಾಗಾಂತ ಎಲ್ಲರೂ ಕೊಡಬೇಕಾಗುತ್ತಾ ಎಂದಿದ್ದೆ. ಅದಕ್ಕೆ ಎಲ್ಲರೂ ನಾನು ಸಿದ್ದರಾಮಯ್ಯ ಪರ ಎಂದು ಹೇಳಿದ್ರು. ಮುಡಾ ಸಭೆಯಲ್ಲಿ ಭಾಗಿಯಾದವರೂ ಈ ಮಾತು ಹೇಳಿದ್ರು. ಸಭೆಯಲ್ಲಿ ಒಂದೇ ಮಾತು ಆಡದವರು, ಈ ಮಾತುಗಳನ್ನು ಹೇಳಿದ್ರು ಎಂದು ತಿರುಗೇಟು ನೀಡಿದರು.

ಮುಡಾ ಕೇಸ್‌ನಲ್ಲಿ ಲೋಕಾಯುಕ್ತ ಸತ್ಯ ಹೇಳಿದ್ದಾರೆ. ಅವರ ರಾಜೀನಾಮೆ ಕೇಳುವುದಕ್ಕೆ ಇದು ಸೂಕ್ತವಾದ ವಿಚಾರವೇ ಅಲ್ಲ. 10 ತಿಂಗಳಿಂದ ಬರೀ ಇದೇ ವಿಚಾರ ಎಲ್ಲ ಕಡೆ ಆಗಿ ಹೋಯ್ತು. ಅಂದಿನ ನನ್ನ ಮಾತು, ಹಲವರು ನನ್ನ ಮೇಲೆ ಸೇಡು ಸಾದಿಸಲು ಕಾರಣ ಆಯಿತು. ಸಿದ್ದರಾಮಯ್ಯ ಅಷ್ಟೇ ಅಲ್ಲ, ಅಧಿಕಾರದಲ್ಲಿ ಇರುವ ಯಾರನ್ನೇ ಆದರೂ ಕುಗ್ಗಿಸುವ ಕೆಲಸ ಮಾಡಬಾರದು. ಇದರಲ್ಲಿ ಪ್ರಭಾವ ಬೀರುವಂತದ್ದು ಏನಿದೆ? ಅಂತಹ ದೊಡ್ಡ ಪ್ರಕರಣವೂ ಇದಲ್ಲ. ಪಾರ್ವತಿ ಅವರು 30 ವರ್ಷದಲ್ಲಿ ಸಾರ್ವಜನಿಕವಾಗಿ ಕಾಣಿಕೊಂಡಿಲ್ಲ ಎಂದರು.

ಇದೇ ವೇಳೆ ಬಿ‌ ರಿಪೋರ್ಟ್ ನಿಂದ ಸಿದ್ದರಾಮಯ್ಯ ಕುರ್ಚಿ ಮತ್ತಷ್ಟು ಗಟ್ಟಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ರಾಜಕಾರಣದಲ್ಲಿ ಸಿದ್ದರಾಮಯ್ಯ ರಷ್ಟು ಅದೃಷ್ಟವಂತ ಮತ್ತೊಬ್ಬ ಇಲ್ಲ. 2014ರಲ್ಲೇ ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಕೆಳಗಿಳಿತಾರೆ ಅಂದಿದ್ರು. ಆದ್ರೆ ದೆಹಲಿಯಲ್ಲೇ ಕಾಂಗ್ರೆಸ್ ಬಿದ್ದೊಯ್ತು. ಸಿದ್ದರಾಮಯ್ಯ ಗಟ್ಟಿಯಾಗಿ ಉಳಿದುಕೊಂಡ್ರು.

ಹಾಗೆಯೇ ಈಗಲೂ ಹಾಗೆಯೇ ಇದ್ದಾರೆ. ಡಿಕೆ.ಶಿವಕುಮಾರ್ ಕೂಡ ಸಿಎಂ ಆಗುತ್ತಾರೆ. ಅದು ಯಾವಾಗ ಏನೋ ನೋಡಬೇಕು ಅಷ್ಟೇ. ಆದ್ರೆ ಅವರು ಒಂದಲ್ಲ‌ ಒಂದು ದಿನ ಸಿಎಂ ಆಗುತ್ತಾರೆ ಅದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಿಎಂ ಆಗುತ್ತೀನಿ ಅಂತಲೇ ಅವರು ಅಷ್ಟು ಮಾಡುತ್ತಿರುವುದು ಎಂದರು.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button