ನೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಾ ಕಾರಣ ನೋಟಿಸ್ ನೀಡುವ ಮೂಲಕ ಪಕ್ಷಪಾತದಿಂದ ವರ್ತಿಸುತ್ತಿರುವ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಈ ಕೂಡಲೇ ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿಂದು ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಮತ್ತು ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಕೆಡವಲು ಪ್ರಯತ್ನ ಮಾಡುತ್ತಿದ್ದು, ಅವರು ಯಶಸ್ವಿಯಾಗುವುದಿಲ್ಲ ಎಂದರು. ಅಂತಹ ದುಸ್ಸಾಹಸಕ್ಕೆ ಬಿಜೆಪಿ ಅಥವಾ ಕೇಂದ್ರ ಸರ್ಕಾರ ಕೈಹಾಕಿದರೆ ಮುಂದಿನ ಪರಿಣಾಮಗಳಿಗೆ ಅವರೇ ಹೊಣೆ ಎಂದರು.
ಕೇಂದ್ರದ ಎನ್.ಡಿ.ಎ. ಸರ್ಕಾರ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಮತ್ತು 7 ಕೋಟಿ ಜನರ ಮೇಲೆ ಪ್ರಹಾರ ಮಾಡುತ್ತಿದೆ, ಮಲತಾಯಿ ಧೋರಣೆ ಅನುಸರಿಸುತ್ತಿದೆ ಮತ್ತು ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿದರು.
ಬರ ಪರಿಹಾರ, ನೆರೆ ಪರಿಹಾರ ಮತ್ತು ರಾಜ್ಯಕ್ಕೆ ಪಂಚವಾರ್ಷಿಕ ಯೋಜನೆಯಲ್ಲಿ ಬರಬೇಕಾದ ಅನುದಾನದಲ್ಲೂ ಮೋಸ ಮಾಡುತ್ತಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡುವ ಮತ್ತು ನಮ್ಮ ಹಕ್ಕಿಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಸ್ಥಿತಿ ಬಂದಿದೆ. ಕೇಂದ್ರದ ವರ್ತನೆ ಒಕ್ಕೂಟ ವ್ಯವಸ್ಥೆಗೇ ಮಾರಕವಾಗಿದೆ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದರು.