ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಗಲಭೆ ಪೀಡಿತವಾಗಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಅಮಿತ್ ಶಾ ಅವರ ಹೇಳಿಕೆ ಕೇವಲ ದ್ವೇಷ ಭಾಷಣವಲ್ಲ, ಬೆದರಿಕೆ ತಂತ್ರ. ಇದು ಕೇಂದ್ರ ಗೃಹ ಸಚಿವರಿಗೆ ತಕ್ಕುದಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇಂತಹ ಹೇಳಿಕೆಗಳು ಅಮಿತ್ ಶಾ ಅವರ 4-ಐಗಳ ತಂತ್ರದ ಭಾಗವಾಗಿದೆ – ಪ್ರಚೋದಿಸುವುದು, ಕೆರಳಿಸುವುದು, ಅವಮಾನಿಸುವುದು ಮತ್ತು ಬೆದರಿಸುವುದು ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
“ಚುನಾವಣೆ ಸಮಯದಲ್ಲಿ, ಅನೇಕ ವಿಷಯಗಳನ್ನು ಹೇಳಲಾಗುತ್ತದೆ. ಆದರೆ ಇದು ಪ್ರಚೋದನೆಯಾಗಿದೆ. ಇದು ಆಕಸ್ಮಿಕವಲ್ಲ, ಇದು ಭಾರತೀಯ ಜನತಾ ಪಕ್ಷದ ಕಾರ್ಯತಂತ್ರದ ಭಾಗವಾಗಿದೆ. ಅವರು ಸೋಲುತ್ತಿದ್ದಾರೆಂದು ತಿಳಿದಿದೆ. ಹೀಗಾಗಿ ಮತದಾರರನ್ನು ಧ್ರುವೀಕರಿಸಲು ಕೋಮುಗಲಭೆ ಸಮಸ್ಯೆಯನ್ನು ಕಂಡುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇರುವಾಗ ಗಲಭೆ ಏಕೆ ಆಗುತ್ತಿಲ್ಲ ಎಂದು ಜನ ಕೇಳಿದರೆ, ಬಿಜೆಪಿ-ಆರ್ಎಸ್ಎಸ್ ಗಲಭೆ ಸೃಷ್ಟಿಸುವ ಎಂಜಿನಿಯರ್ ಗಳು ಎಂದು ನಾನು ಅವರಿಗೆ ಹೇಳುತ್ತೇನೆ ಎಂದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಎನ್ಕ್ಯಾಶ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್, “ಕಳೆದ ನಾಲ್ಕು ತಿಂಗಳಿನಿಂದ ನಾವು ಹಲವಾರು ಚುನಾವಣಾ ಪೂರ್ವ ಖಾತರಿಗಳನ್ನು ನೀಡಿದ್ದೇವೆ. ಬಿಜೆಪಿ ಒಂದು ಅಸಾಧಾರಣ ಚುನಾವಣಾ ಯಂತ್ರವಾಗಿದ್ದು, ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡುತ್ತಾರೆ ಮತ್ತು ಉತ್ತಮ ಪ್ರಚಾರಕರನ್ನು ಸಹ ಅವರು ಹೊಂದಿದ್ದಾರೆ. ಆದಾಗ್ಯೂ, ಜನ ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.