ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ರಾಷ್ಟ್ರೀಯ ಪಕ್ಷ ಮಾನ್ಯತೆ ನೀಡಿ ಕೇಂದ್ರ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ.
ಇದೇ ವೇಳೆ ತೃಣ ಮೂಲ ಕಾಂಗ್ರೆಸ್ (TMC) ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ರಾಷ್ಟ್ರೀಯ ಪಕ್ಷಗಳು ಅಲ್ಲ ಎಂದು ಹೇಳಿದೆ. ದೆಹಲಿ, ಪಂಜಾಬ್ ನಂತರ ಗುಜರಾತ್ ರಾಜ್ಯದಲ್ಲೂ ಕೆಲವೊಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಷ್ಟ್ರೀಯ ಸ್ಥಾನಮಾನ ಪಡೆಯುವ ಅರ್ಹತೆಯನ್ನು ಗಿಟ್ಟಿಸಿಕೊಂಡಿತ್ತು. ಸದ್ಯ ಚುನಾವಣಾ ಆಯೋಗವು ಆಪ್ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡಿದೆ. ಅದರಂತೆ ಕೇವಲ 10 ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ.
10 ವರ್ಷಗಳ ಹಿಂದೆ ಎಎಪಿ ರಚನೆಯಾಗಿ ಭರ್ಜರಿ ಉಚಿತ ಕೊಡುಗೆಗಳ ಘೋಷಣೆಗಳೊಂದಿಗೆ ದೆಹಲಿಯಲ್ಲಿ ಅಧಿಕಾರಕ್ಕೇರಿದ್ದ ಆಪ್ ಪಕ್ಷ, ನಂತರ ಮತ್ತೊಮ್ಮೆ ಅಧಿಕಾರ ಹಿಡಿಯಿತು. ಕಾಂಗ್ರೆಸ್ ಆಡಳಿತವಿದ್ದ ಪಂಜಾಬ್ ರಾಜ್ಯದಲ್ಲಿ ಪ್ರಚಂಡ ಗೆಲುವು ದಾಖಲಿಸಿ ಸರ್ಕಾರ ರಚನೆ ಮಾಡಿತ್ತು. ನಂತರ ಗೋವಾ ಟಾರ್ಗೆಟ್ ಮಾಡಿದ್ದ ಆಪ್, ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಬಳಿಕ ಗುಜರಾತ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಪ್ ಪಕ್ಷವು ಐದು ಸ್ಥಾನಗಳನ್ನು ಗೆದ್ದುಗೊಳ್ಳುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ವಾರಗಳು ಬಾಕಿ ಇರುವಾಗ, ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷವೆಂದು ಗುರುತಿಸಲು ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪಕ್ಷದಿಂದ ಪದೇ ಪದೇ ವಿನಂತಿ ಮತ್ತು ಪ್ರಾತಿನಿಧ್ಯಗಳ ಹೊರತಾಗಿಯೂ ಇಸಿಐ ಎಎಪಿಯನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಲು ವಿಳಂಬ ಮಾಡುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಆಮ್ ಆದ್ಮಿ ಪಕ್ಷದ ಮನವಿ ಪರಿಶೀಲಿಸಿ ಏ.13ರೊಳಗೆ ಈ ಬಗ್ಗೆ ನಿರ್ಧರಿಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು.