ಬೆಂಗಳೂರು: ಬಿಜೆಪಿ ಅಜೆಂಡಾ ಏನು ಎಂಬುದನ್ನು ನಳಿನ್ ಕುಮಾರ್ ಕಟೀಲ್ ತೋರಿಸಿಕೊಟ್ಟಿದ್ದಾರೆ. ಉತ್ತರ ಪ್ರದೇಶ ಸಿಎಂಗೆ ಮೊದಲು ಲವ್ ಮಾಡಲು ಹೇಳಿ. ಅವರಿಗೆ ಲವ್ ಬಗ್ಗೆ ಏನೂ ಗೊತ್ತಿಲ್ಲ. ಅವರಿಗೆ ಲವ್ ಮಾಡಿ ಗೊತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಇಬ್ರಾಹಿಂ ಅವರು, ನಳಿನ್ ಕುಮಾರ್ ಕಟೀಲ್ ಪೋಲಿ ಹುಡುಗರು ಮಾತನಾಡುವ ಥರ ಮಾತನಾಡಿದ್ದಾರೆ, ಮುಂಡೇವಾ ಮೊದಲು ಯುಪಿ ಸಿಎಂ ಗೆ ಲವ್ ಮಾಡೋಕೆ ಹೇಳಿ ಎಂದಿದ್ದಾರೆ. ಚುನಾವಣೆಯಲ್ಲಿ ಇಂಥವರನ್ನು ಜನರು ಒದ್ದು ಹೊರಗೆ ಹಾಕಬೇಕು. ಮುಂದೆ ಬೆಳೆಯೋ ಮಕ್ಕಳಿಗೆ ಕಟೀಲ್ ಅವರು ಏನು ಪಾಠ ಮಾಡ್ತಿದಾರೆ ಎಂದು ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ 12 ಜನರ ವಿಡಿಯೋ ಮಾಡಲಾಗಿದೆ. ಆ 12 ಜನರೂ ಕೋರ್ಟಿಗೆ ಹೋಗಿ ಸ್ಟೇ ತಂದಿದ್ದಾರೆ. ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಸ್ವತಃ ಸ್ಟೇ ತಂದಿದ್ದಾರೆ. ಈ ವಿಡಿಯೋ ವಿಚಾರಕ್ಕೆ ಬಿಜೆಪಿಯಲ್ಲಿ ಮೂರು ಗುಂಪಾಗಿದೆ. ಒಂದು ಗುಂಪು ಆ ಕ್ಯಾಸೇಟ್ ಹೊರಗೆ ತರಬೇಕು ಅಂತ, ಇನ್ನೊಂದು ಟೀಂ ಬೇಡ ಅಂತ. ಮುಂಬೈ ವಿಡಿಯೋ ಪ್ರಕರಣದಲ್ಲಿ ಮೂವರು ಮಂತ್ರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರ ಬಸ್ ಯಾತ್ರೆಗೂ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. ಕೋಲಾರದ ಶ್ರೀನಿವಾಸ ಗೌಡ, ಗುಬ್ಬಿ ಶ್ರೀನಿವಾಸ ಅವರನ್ನು ಕರೆದುಕೊಂಡ್ರಲ್ಲಾ. ಈಗ ಕರೆದುಕೊಳ್ಳಿ ನೋಡೋಣ. ತಾಕತ್ ಇದ್ರೆ ನೀವು ಮಕ್ಕಳನ್ನು ಹುಟ್ಟಿಸಿ. ಬೇರೆ ಪಕ್ಷದಿಂದ ಯಾಕೆ ಕರೆದು ಕೊಳ್ತೀರಾ. ಜೆಡಿಎಸ್ ಪಂಚರತ್ನ ಯಾತ್ರೆ ನೋಡಿ ಈಗ ಕಾಂಗ್ರೆಸ್, ಬಿಜೆಪಿಯವರಿಗೆ ಭಯ ಬಂದಿದೆ ಎಂದು ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡರು ರೈತರ ಕಾಲಿನ ನೆತ್ತರಿನಿಂದ ಜನಿಸಿದ್ದಾರೆ, ರೈತರೇ ಅವರ ಉಸಿರು, ಜೆಡಿಎಸ್ ಭದ್ರ ಕೋಟೆಯನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ ಎಂದು ಇಬ್ರಾಹಿಂ ಸವಾಲು ಹಾಕಿದ್ದಾರೆ.