ನವದೆಹಲಿ: ಮಹಾತ್ಮಾ ಗಾಂಧಿಯವರ ಹತ್ಯೆ ವಿಷಯ ಮತ್ತು ಕೆಲ ಕಾಲ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದ ವಿಷಯ ಸೇರಿದಂತೆ ಎನ್‌ಸಿಇಆರ್‌ಟಿ ಪಠ್ಯದಿಂದ ಕೆಲವು ವಿಷಯಗಳನ್ನು ಕೈಬಿಟ್ಟ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಸರ್ಕಾರವು ಇತಿಹಾಸವನ್ನು ತಿರುಚಿದೆ ಮತ್ತು ಇದು “ಸೇಡಿನ ಕ್ರಮವಾಗಿದೆ” ಎಂದು ಬುಧವಾರ ಹೇಳಿದೆ.
ಇತಿಹಾಸವನ್ನು ಮರು ಬರೆಯಲು ಯತ್ನಿಸುವವರನ್ನು ಇತಿಹಾಸದ ಕಸದ ಬುಟ್ಟಿಗೆ ಹಾಕಲಾಗುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಎಷ್ಟೇ ಪ್ರಯತ್ನಿಸಿದರೂ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ. “ನೀವು ಪಠ್ಯಪುಸ್ತಕಗಳಲ್ಲಿ ಬದಲಾವಣೆಗಳನ್ನು ಮಾಡಬಹುದು. ಆದರೆ ನೀವು ದೇಶದ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಇದು ಬಿಜೆಪಿ-ಆರ್‌ಎಸ್‌ಎಸ್‌ನ ಪ್ರಯತ್ನ, ಅವರು ಎಷ್ಟು ಬೇಕಾದರೂ ಪ್ರಯತ್ನಿಸಬಹುದು, ಆದರೆ ಅವರು ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಕುರಿತು ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವಿಟ್ಟರ್‌ನಲ್ಲಿ, “ಸೇಡಿನಿಂದ ಇತಿಹಾಸ ಅಳಿಸಲಾಗುತ್ತಿದೆ” ಎಂದು ಹೇಳಿದ್ದಾರೆ. ಪಠ್ಯಪುಸ್ತಕಗಳಿಂದ ಮೊಘಲರು ಮತ್ತು ದಲಿತ ಲೇಖಕರಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಸಹ ತೆಗೆದುಹಾಕಲಾಗಿದೆ ಎಂಬ ಮತ್ತೊಂದು ವರದಿಯನ್ನು ಸಹ ಟ್ಯಾಗ್ ಮಾಡಿದ್ದಾರೆ.