ಕುಪ್ವಾರ(ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದ ಗಡಿ ಜಿಲ್ಲೆಯ ಕುಪ್ವಾರದಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಹಿಮದಿಂದ ಆವೃತವಾದ ಮಚಿಲ್ ಸೆಕ್ಟರ್‌ನಲ್ಲಿ ಆಳವಾದ ಕಮರಿಗೆ ಜಾರಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ ಮೂವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ.
ಭಾರತೀಯ ಸೇನೆಯ ಜೆಸಿಒ ಮತ್ತು ಇತರ ಇಬ್ಬರು ರ್ಯಾಂಕ್ ದರ್ಜೆಯ ಸೈನಿಕರು ಮಚ್ಚಿಲ್ ಸೆಕ್ಟರ್‌ನಲ್ಲಿ ಇಂದು ನಸುಕಿನ ಜಾವ ಗಸ್ತು ತಿರುಗುತ್ತಿದ್ದಾಗ ಕಮರಿಗೆ ಜಾರಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಫಾರ್ವರ್ಡ್ ಪ್ರದೇಶದಲ್ಲಿ ನಿಯಮಿತ ಕಾರ್ಯದ ಸಮಯದಲ್ಲಿ, ದಾರಿಯಲ್ಲಿ ದಟ್ಟ ಹಿಮಪಾತವುಂಟಾಗಿತ್ತು. ಈ ವೇಳೆ ಆಕಸ್ಮಿಕವಾಗಿ ಆಳವಾದ ಕಮರಿಗೆ ಬಿದ್ದಿದ್ದಾರೆ. ಮೂವರು ಸೇನಾ ಯೋಧರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.