ಮುಂಬೈ: ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್‌ನ ವರದಿಯ ಬಳಿಕ ಅದಾನಿ ಸಮೂಹಕ್ಕೆ ಸೇರಿದ ಕಂಪನಿಗಳ ಷೇರು ಮೌಲ್ಯ ಒಂದೇ ಸಮನೆ ಕುಸಿತ ಕಾಣುತ್ತಿದ್ದು, ಕಳೆದ ಮೂರು ದಿನಗಳಲ್ಲಿ 5.56 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿವೆ.
ಕಳೆದ ಮಂಗಳವಾರದಿಂದ ಸೋಮವಾರದವರೆಗೆ, ಅದಾನಿ ಸಮೂಹ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ಒಟ್ಟು 5.56 ಲಕ್ಷ ಕೋಟಿ ರೂ. ಕಡಿಮೆಯಾಗಿದೆ.
ಗಣರಾಜ್ಯೋತ್ಸವದ ನಿಮಿತ್ತ ಗುರುವಾರ ಷೇರುಪೇಟೆ ಬಂದ್ ಆಗಿತ್ತು. ಇಂದು ಮೂರನೇ ನೇರ ವಹಿವಾಟಿನ ಅವಧಿಯಲ್ಲಿ, ಅದಾನಿ ಸಮೂಹದ ಹೆಚ್ಚಿನ ಸಂಸ್ಥೆಗಳು ಕುಸಿತ ಕಂಡಿದ್ದು, ಅದಾನಿ ಟೋಟಲ್ ಗ್ಯಾಸ್ ಶೇ.20, ಅದಾನಿ ಗ್ರೀನ್ ಎನರ್ಜಿ ಶೇ.19.99, ಅದಾನಿ ಟ್ರಾನ್ಸ್‌ಮಿಷನ್ ಶೇ.14.91 ಮತ್ತು ಅದಾನಿ ಪವರ್ ಶೇ.5ರಷ್ಟು ಕುಸಿತ ಕಂಡಿದೆ.
ಇನ್ನು ಅದಾನಿ ಸಮೂಹಕ್ಕೆ ಸೇರಿದ ಎನ್‌ಡಿಟಿವಿಯ ಷೇರುಗಳು ಶೇ. 4.99ರ ಕುಸಿದೊಂದಿಗೆ ಲೋವರ್ ಸರ್ಕ್ಯೂಟ್‌ಗೆ ಬಂದಿದ್ದು 243.55 ರೂ.ನಲ್ಲಿವೆ. ಎಸಿಸಿ ಲಿ. ಶೇ. 2.11ರಷ್ಟು ಕುಸಿತ ಕಂಡು 1,840 ರೂ. ಮುಟ್ಟಿದೆ. ಅಂಬುಜಾ ಸಿಮೆಂಟ್ಸ್ ಶೇ. 5.94ರಷ್ಟು ಇಳಿಕೆಯಾಗಿದ್ದು 357.85 ರೂ. ಮಟ್ಟದಲ್ಲಿದೆ.
ಹಿಂಡನ್‌ಬರ್ಗ್ ರಿಸರ್ಚ್ ವರದಿಯ ನಂತರ ಕಳೆದ ಶುಕ್ರವಾರ ಅದಾನಿ ಸಮೂಹದ ಷೇರುಗಳು ಶೇಕಡಾ 20 ರಷ್ಟು ಕುಸಿತ ಕಂಡಿದ್ದವು.