ಕೇಂದ್ರ ಸರ್ಕಾರ ನ್ಯಾಯಾಧೀಶರ ನೇಮಕ ಪ್ರಸ್ತಾವನೆಗಳನ್ನು ಪದೇಪದೆ ಹಿಂದಿರುಗಿಸಲು ಸಾಧ್ಯವಿಲ್ಲ: ಸುಪ್ರೀಂ ಕೊಲಿಜಿಯಂ

ನವದೆಹಲಿ: ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ವಕೀಲರಾದ ಅಮಿತೇಶ್ ಬ್ಯಾನರ್ಜಿ, ಸಕ್ಯಾ ಸೇನ್ ಮತ್ತು ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿ ವಕೀಲ ಸೋಮಶೇಖರ್ ಸುಂದರೇಶನ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಎರಡನೇ ಬಾರಿ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಈ ಶಿಫಾರಸುಗಳನ್ನು ಪದೇ ಪದೇ ಹಿಂದಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಹೇಳಿದೆ.

ನ್ಯಾಯಾಧೀಶರ ಹುದ್ದೆಗೆ ಶಿಫಾರಸುಗೊಂಡಿರುವ ವ್ಯಕ್ತಿಯು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಿಂದ ಸಾಂವಿಧಾನಿಕ ಹುದ್ದೆಯಿಂದ ವಿಮುಖರಾಗುವುದಿಲ್ಲ. ಅವರು ಸಾಮರ್ಥ್ಯ, ಅರ್ಹತೆ ಮತ್ತು ಸಮಗ್ರತೆಯ ಮೇಲೆ ಸಾಂವಿಧಾನಿಕ ಹುದ್ದೆ ಹೊಂದಬಹುದು ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ತ್ರಿಸದಸ್ಯ ಕೊಲಿಜಿಯಂ, ಕಳೆದ ವರ್ಷ ಫೆಬ್ರವರಿ 16 ರಂದು ಸುಂದರೇಶನ್ ಅವರ ಹೆಸರನ್ನು ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಿತ್ತು. ಆದರೆ ನವೆಂಬರ್ 25, 2022 ರಂದು ಕೇಂದ್ರ ಸರ್ಕಾರ ಅವರ ಹೆಸರನ್ನು ಮರುಪರಿಶೀಲನೆ ಮಾಡುವಂತೆ ಕೋರಿತ್ತು.

“ಸುಂದರೇಶನ್ ಅವರು ನ್ಯಾಯಾಲಯಗಳ ಮುಂದೆ ಪರಿಗಣನೆಗೆ ಒಳಪಡುವ ಹಲವಾರು ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಹೀಗಾಗಿ ಅವರ ಶಿಫಾರಸನ್ನು ಮರುಪರಿಶೀಲನೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಕೋರಿತ್ತು” ಎಂದು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಪ್ರಕಟಣೆ ತಿಳಿಸಿದೆ. .

“ಸೋಮಶೇಖರ್ ಸುಂದರೇಶನ್ ಅವರ ಶಿಫಾರಸಿಗೆ ಕೇಂದ್ರದ ಆಕ್ಷೇಪಣೆಯನ್ನು ಪರಿಗಣಿಸಿದ ನಂತರ,  ಸಾಮಾಜಿಕ ಮಾಧ್ಯಮಗಳಲ್ಲಿನ ಅವರ ಅಭಿಪ್ರಾಯಗಳು ಪಕ್ಷಪಾತಿ ಎಂದು ಊಹಿಸಲು ಯಾವುದೇ ಆಧಾರವಾಗುವುದಿಲ್ಲ ಕೊಲಿಜಿಯಂ ಅಭಿಪ್ರಾಯಪಟ್ಟಿದೆ” ಎಂದು ಪ್ರಕಟಣೆ ತಿಳಿಸಿದೆ.

Latest Indian news

Popular Stories