ಚಂಡೀಗಢ: ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಉಗ್ರ ಅಮೃತ್ ಪಾಲ್ ಸಿಂಗ್ ನನ್ನು ಪಂಜಾಬ್ ನ ಮೋಗಾದಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪಂಜಾಬ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖಲಿಸ್ತಾನಿ ಉಗ್ರ ಅಮೃತ್ಪಾಲ್ ಸಿಂಗ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇತ್ತೀಚೆಗಷ್ಟೇ ಅಮೃತ್ಪಾಲ್ ಸಿಂಗ್ ಪತ್ನಿಯನ್ನು ವಶಕ್ಕೆ ಪಡೆಯಲಾಗಿತ್ತು. ಕಿರಣ್ ದೀಪ್ ಕೌರ್ ಅವರು (ಏಪ್ರಿಲ್ 20) ಲಂಡನ್ ಗೆ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದು ಪ್ರಶ್ನೆ ಮಾಡಿದ್ದರು, ನಂತರ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ಮಾರ್ಚ್ 18ರಂದು ಪೊಲೀಸರು ಅಮೃತ್ ಪಾಲ್ ಸಿಂಗ್ ನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಖಲಿಸ್ತಾನ್ ಸಹಾನುಭೂತಿಯು ಜಲಂಧರ್ ಜಿಲ್ಲೆಯಲ್ಲಿ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡು, ವಾಹನಗಳನ್ನು ಬದಲಿಸಿ ಸಿನಿಮೀಯ ರೂಪದಲ್ಲಿ ಅಮೃತ್ ಪಾಲ್ ಎಸ್ಕೇಪ್ ಆಗಿದ್ದ. ಅಂದಿನಿಂದಲೂ ಈತನಿಗಾಗಿ ದೇಶದಲ್ಲಿ ಹುಡುಕಾಟ ನಡೆಯುತ್ತಲೇ ಇತ್ತು. ನೇಪಾಳಕ್ಕೆ ಪರಾರಿಯಾಗಿದ್ದಾರೆ ಎಂದೂ ಹೇಳಲಾಗಿತ್ತು. ಕೊನೆಗೂ ಈತನನ್ನು ಬಂಧಿಸುವಲ್ಲಿ ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ.