ಜೋಶಿಮಠದ ಬೆನ್ನಲ್ಲೇ ಉತ್ತರಾಖಂಡದಲ್ಲೂ ಭೂಕುಸಿತ, 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು

ಚಮೋಲಿ (ಉತ್ತರಾಖಂಡ) : ಜೋಶಿಮಠದಲ್ಲಿ ಭೂಕುಸಿತದಿಂದ ಸುಮಾರು 600ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಬಿದ್ದಿದೆ. ಇದರ ಬೆನ್ನಲ್ಲೇ, ಉತ್ತರಾಖಂಡ ಕರ್ಣಪ್ರಯಾಗದ ಬಹುಗುಣ ನಗರದ ವಿವಿಧೆಡೆ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸಿದ್ದು, ಸುಮಾರು 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಬಹುಗುಣ ನಗರದ ಹಲವು ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಇತರ ಪ್ರದೇಶಗಳಲ್ಲಿರುವ ತಮ್ಮ ಸಂಬಂಧಿಕರೊಂದಿಗೆ ಆಶ್ರಯ ಪಡೆದಿವೆ. ಕರ್ಣಪ್ರಯಾಗ ಅಪ್ಪರ್ ಬಜಾರ್ ವಾರ್ಡ್‌ನ ಮೂವತ್ತು ಕುಟುಂಬಗಳು ಸಹ ದುರಂತದ ಭೀತಿಯಲ್ಲಿವೆ. ಸ್ಥಳೀಯ ಪುರಸಭೆಯು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸರ್ಕಾರಕ್ಕೆ ಸಹಾಯಕ್ಕಾಗಿ ವಿನಂತಿಸಿದೆ.

ಸಂತ್ರಸ್ತರು ರಾಜ್ಯ ಸರ್ಕಾರದ ನೆರವಿಗಾಗಿ ಮನವಿ ಮಾಡುತ್ತಿದ್ದಾರೆ. ಏತನ್ಮಧ್ಯೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಚಮೋಲಿ ಜೋಶಿಮಠ ಪ್ರದೇಶದಲ್ಲಿ ಸಂಭವಿಸುತ್ತಿರುವ ಭೂಕುಸಿತವನ್ನು ಗಮನದಲ್ಲಿಟ್ಟುಕೊಂಡು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಬುಲೆಟಿನ್ ಅನ್ನು ಸೋಮವಾರ ಬಿಡುಗಡೆ ಮಾಡಿದೆ.

ಬುಲೆಟಿನ್ ಪ್ರಕಾರ, ಜೋಶಿಮಠ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 678 ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಭದ್ರತೆಯ ದೃಷ್ಟಿಯಿಂದ ಒಟ್ಟು 81 ಕುಟುಂಬಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಜೋಶಿಮಠ ನಗರ ಪ್ರದೇಶದ ಅಡಿಯಲ್ಲಿ, 213 ಕೊಠಡಿಗಳನ್ನು ತಾತ್ಕಾಲಿಕವಾಗಿ ವಾಸಯೋಗ್ಯವೆಂದು ಗುರುತಿಸಲಾಗಿದೆ.

Latest Indian news

Popular Stories