ಹೈದರಾಬಾದ್: ಮಧ್ಯರಾತ್ರಿ ನಿವಾಸಕ್ಕೆ ಬಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿರುವುದು ತೆಲಂಗಾಣ ಬಿಜೆಪಿ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಬುಧವಾರ ತಡರಾತ್ರಿ ಪೊಲೀಸರು ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಸಂಸದರಾಗಿರುವ ಸಂಜಯ್ ಬಂಡಿ ಅವರ ಕರೀಂನಗರದ ನಿವಾಸಕ್ಕೆ ಬಂದು ಬಂಧಿಸಿದ್ದಾರೆ. ಅವರನ್ನು ಸದ್ಯ ಪೊಲೀಸ್ ಕಸ್ಟಡಿಯಲ್ಲಿರಿಸಿದ್ದಾರೆ ವರದಿ ತಿಳಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಬಂಡಿ ಅವರನ್ನು ಮಧ್ಯರಾತ್ರಿ ಬಂದು ಪೊಲೀಸರು ಬಂಧಿಸಿದ್ದಾರೆ. ಅವರ ನಿವಾಸಕ್ಕೆ ಬಂದು ಪೊಲೀಸರು ಅಕ್ರಮವಾಗಿ ಅವರನ್ನು ಬಂಧಿಸಿದ್ದಾರೆ. ಕಾನೂನು ಕ್ರಮ ಏನೇ ಇದ್ದರೂ ಅದನ್ನು ಮುಂಜಾನೆ ಮಾಡಬಹುದಿತ್ತು. ಇದು ಸ್ಪಷ್ಟವಾಗಿ ಮೋದಿ ಅವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಮಾಡಿದ್ದಾರೆ. ಕೆಸಿಆರ್ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಈ ರೀತಿಯಾಗಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮೇಂದ್ರ ರೆಡ್ಡಿ ಹೇಳಿದ್ದಾರೆ.
ಏ. 8 ರಂದು ಪ್ರಧಾನಿ ಮೋದಿ ಸಿಕಂದರಾಬಾದ್- ತಿರುಪತಿ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಉದ್ಘಾಟಿಸಲು ತೆಲಂಗಾಣಕ್ಕೆ ಬರಲಿದ್ದಾರೆ. ಇದರೊಂದಿಗೆ ಪ್ರಧಾನಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.
ಸಂಜಯ್ ಅವರನ್ನು ಬಂಧಿಸಲು ಬಂದ ಪೊಲೀಸರು ಹಾಗೂ ಬೆಂಬಲಿಗರೊಂದಿಗೆ ವಾಗ್ವಾದ ನಡೆಯಿತು. ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.