ಪುಣೆ: ಮಹಾರಾಷ್ಟ್ರದ ಪುಣೆಯ ನದಿಯೊಂದರಿಂದ ಹೊರ ತೆಗೆಯಲಾದ ಒಂದೇ ಕುಟುಂಬದ ಏಳು ಮಂದಿ ಮೃತದೇಹಗಳ ತನಿಖೆಯಲ್ಲಿ ಮಹತ್ವದ ಮಾಹಿತಿ ದೊರೆತಿದೆ. ಅವರೆಲ್ಲರೂ ಸಂಬಂಧಿಕರಿಂದಲೇ ಹತ್ಯೆಯಾಗಿದ್ದಾರೆ.
ಈ ಹಿಂದೆ ಆರೋಪಿಯೊಬ್ಬನ ಪುತ್ರನ ಸಾವಿನ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
ಜನವರಿ 18 ರಿಂದ 24ರ ನಡುವೆ ಭೀಮಾ ನದಿ ದಂಡೆಯಲ್ಲಿ ಮೂರರಿಂದ ಏಳು ವರ್ಷದೊಳಗಿನ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮೃತರ ಸಂಬಂಧಿಕರಾದ ಐವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತನಿಖೆ ವೇಳೆ ಎಲ್ಲರನ್ನು ಹತ್ಯೆ ಮಾಡಿರುವ ಬಗ್ಗೆ ಕೆಲವೊಂದು ಮಾಹಿತಿ ತಿಳಿದು ಬಂದಿತು. ಆರೋಪಿ ಪೈಕಿ ಒಬ್ಬನಾದ ಅಶೋಕ್ ಪವಾರ್ ಪುತ್ರ ಧನಂಜಯ್ ಪವಾರ್ ಅಪಘಾತದಲ್ಲಿ ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದ. ಈ ಸಂಬಂಧ ಪುಣೆಯಲ್ಲಿ ಕೇಸ್ ದಾಖಲಾಗಿತ್ತು .
ಇದರಿಂದ ಆಕ್ರೋಶಗೊಂಡಿದ್ದ ಅಶೋಕ್, ತನ್ನ ಮಗನ ಸಾವಿಗೆ ಹತ್ಯೆಯಾದ ಮೋಹನ್ ಪುತ್ರನೇ ಕಾರಣ ಎಂದು ಕುಪಿತಗೊಂಡಿದ್ದ. ಇದೇ ಕಾರಣದಿಂದ ಪ್ರತೀಕಾರವಾಗಿ ಏಳು ಜನರನ್ನು ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಗೋಯೆಲ್ ತಿಳಿಸಿದ್ದಾರೆ.