ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ, ಅವರ ಪತ್ನಿ ಮತ್ತು ಇತರ ಕೆಲವು ಆರೋಪಿಗಳಿಗೆ ಸೇರಿದ 52 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ತಿಳಿಸಿದೆ.
ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಮನೀಶ್ ಸಿಸೋಡಿಯಾ ಮತ್ತು ಅವರ ಪತ್ನಿ ಸೀಮಾ ಸಿಸೋಡಿಯಾ ಅವರ ಎರಡು ಆಸ್ತಿಗಳು, ಮತ್ತೋರ್ವ ಆರೋಪಿ ರಾಜೇಶ್ ಜೋಶಿ(ಚಾರಿಯಟ್ ಪ್ರೊಡಕ್ಷನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ) ಮತ್ತು ಗೌತಮ್ ಮಲ್ಹೋತ್ರಾ ಅವರ ಜಮೀನು/ಫ್ಲಾಟ್‌ಗಳನ್ನು ಒಳಗೊಂಡಿರುವ ಇತರ ಸ್ಥಿರಾಸ್ತಿಗಳನ್ನು(ರೂ. 7.29 ಕೋಟಿ) ಮುಟ್ಟುಗೋಲು ಹಾಕಿಕೊಳ್ಳಲು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ.
ಮನೀಶ್ ಸಿಸೋಡಿಯಾ ಅವರ ಬ್ಯಾಂಕ್ ಬ್ಯಾಲೆನ್ಸ್ 11.49 ಲಕ್ಷ ರೂಪಾಯಿ, ಬ್ರಿಂಡ್ಕೋ ಸೇಲ್ಸ್ ಪ್ರೈ.ಲಿ (ಮೊತ್ತ ರೂ. 16.45 ಕೋಟಿ) ಮತ್ತು ಇತರರ ಆಸ್ತಿ ಸೇರಿದಂತೆ 44. 29 ಕೋಟಿ ರೂ. ಮೌಲ್ಯದ ಚರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟು ಲಗತ್ತು ಮೌಲ್ಯ 52.24 ಕೋಟಿ ರೂಪಾಯಿ ಎಂದು ಇಡಿ ತಿಳಿಸಿದೆ.
ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ದೆಹಲಿ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಕಳೆದ ಮಾರ್ಚ್‌ನಲ್ಲಿ ಇಡಿ ಬಂಧಿಸಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.