ಸಾಗರ್: ಕೇರಳದ ವಯನಾಡ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿ 350ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ದಾರುಣ ಘಟನೆ ಮನಸ್ಸಿಂದ ಮರೆ ಮಾಚುವ ಮುನ್ನವೇ ಇದೀಗ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ.
ಅಂದಹಾಗೆ ಈ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ್ದು, ಇಲ್ಲಿನ ಶಹಪುರ ಪ್ರದೇಶದಲ್ಲಿ ಮನೆಯೊಂದು ಕುಸಿದು ಬಿದ್ದ ಪರಿಣಾಮ ಅದರಡಿಯಲ್ಲಿ ಆಟವಾಡುತ್ತಿದ 9 ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ ಶಿಥಿಲಾವಸ್ಥೆಯಲ್ಲಿರುವ ಮನೆಯ ಬಳಿ ರುದ್ರಿ (ಶಿವಲಿಂಗ) ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ರುದ್ರಿ ಕಟ್ಟುತ್ತಿದ್ದ ವೇಳೆ ಮಕ್ಕಳ ಮೇಲೆ ಮನೆ ಕುಸಿದಿದೆ. ಅಪಘಾತದ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಜಿಲ್ಲಾಡಳಿತ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದ್ದು, ಘಟನಾ ಸ್ಥಳದಲ್ಲಿ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಗೋಪಾಲ ಭಾರ್ಗವ ಇದ್ದಾರೆ. ಸದ್ಯ ಮಕ್ಕಳ ಶವಗಳನ್ನು ಕುಸಿದ ಮನೆಯ ಅವಶೇಷಗಳ ಅಡಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸಾಗರದಲ್ಲಿ ನಡೆದ ಭೀಕರದ ಅವಘಡದ ನಂತರ ಇದೀಗ ಸರ್ಕಾರವೂ ಕ್ರಮಕ್ಕೆ ಮುಂದಾಗಿದ್ದು, ಅಪಘಾತದ ತನಿಖೆಗೆ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಆದೇಶಿಸಿದ್ದಾರೆ. ಇದರೊಂದಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಮೋಹನ್ ಯಾದವ್ ಹೇಳಿದ್ದಾರೆ.
ಶನಿವಾರವೂ ರೇವಾದಲ್ಲಿ ಗೋಡೆ ಕುಸಿದು 4 ಮಕ್ಕಳು ಮೃತಪಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಈ ವಿಚಾರದಲ್ಲಿ ವಿಪಕ್ಷ ಕಾಂಗ್ರೆಸ್ ಪಕ್ಷ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಭೋಪಾಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಮಾತನಾಡಿ, ಇಡೀ ಮಧ್ಯಪ್ರದೇಶದಲ್ಲಿ ಶಾಲೆಗಳ ಸ್ಥಿತಿ ಹದಗೆಟ್ಟಿದೆ. ಶಿಕ್ಷಕರಿಲ್ಲ. ಕಟ್ಟಡಗಳಿಲ್ಲದ ಸಾಕಷ್ಟು ಶಾಲೆಗಳಿವೆ.
ಕಳೆದ 10 ವರ್ಷಗಳಲ್ಲಿ 50 ಲಕ್ಷ ಮಕ್ಕಳು ಶಾಲೆ ಬಿಟ್ಟಿದ್ದಾರೆ. ರೇವಾದಲ್ಲಿ ಗೋಡೆ ಕುಸಿದಿದೆ, ಸರ್ಕಾರಕ್ಕೆ ಈ ಬಗ್ಗೆ ಚಿಂತೆಯಿಲ್ಲ. ಇದು ಅಪಘಾತವಲ್ಲ, ಕೊಲೆ. ಈ ಕೊಲೆಗೆ ಮಧ್ಯಪ್ರದೇಶ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹೊಣೆ ಎಂದು ಟೀಕಿಸಿದ್ದಾರೆ.