ಮಿನಿಬಸ್​ಗೆ ಲಾರಿ ಡಿಕ್ಕಿ; ವೈಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದ ಏಳು ಮಂದಿ ಮೃತ್ಯು 25ಕ್ಕೂ ಹೆಚ್ಚು ಮಂದಿ ಗಂಭೀರ

ಹರಿಯಾಣ: ಲಾರಿ ಹಾಗೂ ಮಿನಿ ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟು, 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ ಅಂಬಾಲಾದಲ್ಲಿ ಶುಕ್ರವಾರ ನಸುಕಿನ ಜಾವ ನಡೆದಿದೆ. ಅಂಬಾಲಾ-ದೆಹಲಿ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ವೈಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದರು ಎಂದು ವರದಿಯಾಗಿದೆ.

ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಂಬಾಲಾ ಕ್ಯಾಂಟ್‌ನ ವೈದ್ಯಕೀಯ ಅಧಿಕಾರಿ ಡಾ.ಕೌಶಲ್ ಕುಮಾರ್, ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ನಿದ್ರೆಯಲ್ಲಿದ್ದರು, ಎಂದು ತಿಳಿದು ಬಂದಿದೆ.

ಅಪಘಾತ ಸಂಭವಿಸಿದ ವೇಳೆ ಲಾರಿ ಚಾಲಕ ಪಾನಮತ್ತನಾಗಿದ್ದ ಎಂದು ವರದಿಯಾಗಿದೆ. ಅಪಘಾತದ ಬಳಿಕ ಆತ ಪರಾರಿಯಾಗಿದ್ದು, ಪೊಲೀಸರು ಆತನನ್ನು ಪತ್ತೆ ಹಚ್ಚುತ್ತಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಂಬಾಲಾ ಕ್ಯಾಂಟ್‌ನ ವೈದ್ಯಕೀಯ ಅಧಿಕಾರಿ ಡಾ.ಕೌಶಲ್ ಕುಮಾರ್ ತಿಳಿಸಿದ್ಧಾರೆ

Latest Indian news

Popular Stories