ಜಾಮಾ ಮಸೀದಿ ಸ್ವಚ್ಛಗೊಳಿಸಲು ಭಾರತೀಯ ಪುರಾತತ್ವ ಇಲಾಖೆಗೆ ಅಲಹಾಬಾದ್ ಹೈಕೋರ್ಟ್ ಸೂಚನೆ

ಪ್ರಯಾಗರಾಜ್: ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿ ಆವರಣವನ್ನು ಸ್ವಚ್ಛಗೊಳಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. ಆದರೆ, ಮಸೀದಿಗೆ ಬಣ್ಣ ಬಳಿಯುವುದಕ್ಕೆ ಅವಕಾಶ ನೀಡಿಲ್ಲ.
ರಂಜಾನ್‌ಗೆ ಮುಂಚಿತವಾಗಿ ಮಸೀದಿಗೆ ಬಣ್ಣ ಬಳಿಯಲು ಮತ್ತು ಸ್ವಚ್ಛಗೊಳಿಸಲು ಅನುಮತಿ ಕೋರಿ ಜಾಮಾ ಮಸೀದಿಯ ಆಡಳಿತ ಸಮಿತಿಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಈ ಆದೇಶವನ್ನು ಹೊರಡಿಸಿದ್ದಾರೆ.
ಜಾಮಾ ಮಸೀದಿಯ ಸ್ಥಳವನ್ನು ಪರಿಶೀಲಿಸಲು ಮತ್ತು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಈ ಸಂಬಂಧ ವರದಿ ಸಲ್ಲಿಸಲು ಮೂವರು ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ನೇಮಿಸುವಂತೆ ಎಎಸ್‌ಐಗೆ ಗುರುವಾರ ನ್ಯಾಯಾಲಯ ಸೂಚಿಸಿತ್ತು.
ಎಎಸ್‌ಐ ನೀಡಿರುವ ವರದಿ ಪ್ರಕಾರ, ಮಸೀದಿಯ ಒಳಭಾಗದಲ್ಲಿ ಸೆರಾಮಿಕ್ ಪೇಂಟ್ ಮಾಡಲಾಗಿದ್ದು, ಸದ್ಯಕ್ಕೆ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ಹೇಳಿತ್ತು.
ಶುಕ್ರವಾರ ನಡೆದ ವಿಚಾರಣೆ ವೇಳೆ ಮಸೀದಿ ಸಮಿತಿ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ, ಬಣ್ಣ ಬಳಿಯುವುದು ಮತ್ತು ಲೈಟಿಂಗ್ ಕೆಲಸ ಮಾತ್ರ ಆಗಬೇಕು ಎಂದು ಮನವಿ ಮಾಡಿದರು.
ಹೀಗಾಗಿ ನ್ಯಾಯಾಲಯವು, ಮಸೀದಿಯಲ್ಲಿನ ಧೂಳನ್ನು ಸ್ವಚ್ಛಗೊಳಿಸುವಂತೆ ಮತ್ತು ಆವರಣದಲ್ಲಿನ ಹುಲ್ಲನ್ನು ತೆರವುಗೊಳಿಸುವಂತೆ ಎಎಸ್ಐಗೆ ಸೂಚಿಸಿತು.
ಮಸೀದಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ನಖ್ವಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು ಎಂದು ರಾಜ್ಯದ ಅಡ್ವೊಕೇಟ್ ಜನರಲ್ ಹೇಳಿದರು.