ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆ ನಡೆಸಲಿದೆ. ಈ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ.
ಪಕ್ಷದೊಳಗೆ ಯಾವುದೇ ಅಪಸ್ವರವಿಲ್ಲ. ವಾಲ್ಮೀಕಿ, ಮುಡಾ ಹಗರಣದ ವಿರುದ್ಧ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಗೃಹ ಸಚಿವರು ಸೇರಿದಂತೆ ನಾಯಕರು ಮತ್ತೊಂದು ಸುತ್ತಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿ ಹೋರಾಟಕ್ಕೆ ಮೊದಲನೇ ಪಾದಯಾತ್ರೆ, ಎರಡನೇ ಪಾದಯಾತ್ರೆ ಎನ್ನಬೇಕಿಲ್ಲ. ಪಕ್ಷದೊಳಗೆ ಎಲ್ಲರೂ ಕೂಡಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಕ್ರಮ ಎಸಗಿದ್ದರೆ ಎಂಟು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏನು ಮಾಡುತ್ತಿತ್ತು? ಆಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಆಗ ಯಾಕೆ ಸುಮ್ಮನಿದ್ದರು.
2018ರಲ್ಲಿ ಕುಮಾರಸ್ವಾಮಿ ಕೈಕಾಲು ಹಿಡಿದು ಮೊದಲು ಸರ್ಕಾರ ರಚಿಸಿದ್ದು ಅವರೇ. ಆಗಿನ ಒಂದೂವರೆ ವರ್ಷದ ಆಡಳಿತದಲ್ಲಿಯೂ ಸುಮ್ಮನಿದ್ದರು. ಈಗ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡುತ್ತಲೇ ಆರೋಪ ಮಾಡತೊಡಗಿದ್ದಾರೆ ಎಂದು ಟೀಕಿಸಿದ್ದಾರೆ.