ರಾಜ್ಯದ ಪರ ಧ್ವನಿ ಎತ್ತದೇ ಬಿಜೆಪಿ ನಾಯಕರು ನೈತಿಕತೆ ಕಳೆದುಕೊಂಡಿದ್ದಾರೆ : ಡಿಕೆಶಿ

ನವದೆಹಲಿ,ಫೆ.7- ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತದೇ ಇರುವ ಬಿಜೆಪಿ ನಾಯಕರು ಹಾಗೂ ಸಂಸದರು ಗಾಂಧಿ ಪ್ರತಿಮೆಯೆದುರು ಧರಣಿ ಮಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಜಂತರ್ ಮಂತರ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮ ಪ್ರತಿಭಟನೆಯನ್ನು ಟೀಕಿಸುವವರು ರಾಜ್ಯಕ್ಕೆ ನೀಡಿದ ಕೊಡುಗೆಯೇನು ಎಂದು ಹೇಳಬೇಕಿದೆ. ನಾವು ಭಾವನಾತ್ಮಕ ವಿಚಾರದ ಮೇಲೆ ರಾಜಕಾರಣ ಮಾಡುತ್ತಿಲ್ಲ. ಜನರ ಬದುಕಿಗಾಗಿ ರಾಜಕಾರಣ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ಬಿಜೆಪಿಯ ಯಾವ ನಾಯಕರು ಕೇಂದ್ರದ ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ 25 ಸಂಸದರನ್ನು ಬಿಜೆಪಿಗೆ ಗೆಲ್ಲಿಸಿಕೊಟ್ಟಿದ್ದರು. ಆದರೆ ಅವರ್ಯಾರು ರಾಜ್ಯದ ಧ್ವನಿಯಾಗಲಿಲ್ಲ. ಇಂದು ಕಾಂಗ್ರೆಸ್ ರಾಜ್ಯದ ಧ್ವನಿಯನ್ನು ದೆಹಲಿಯಲ್ಲಿ ಪ್ರತಿಧ್ವನಿಸುತ್ತಿದೆ ಎಂದು ಹೇಳಿದರು.

Latest Indian news

Popular Stories