ಚುನಾವಣೆ ನ್ಯಾಯಸಮ್ಮತವಾಗಿದ್ದರೆ ಬಿಜೆಪಿ ಅಧಿಕಾರ ಉಳಿಯಲ್ಲ: ಮಾಯಾವತಿ

ಹರ್ದೋಯ್‌ (ಉತ್ತರ ಪ್ರದೇಶ): ಲೋಕಸಭೆ ಚುನಾವಣೆಯು ಮುಕ್ತವಾಗಿ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆದರೆ ಬಿಜೆಪಿಗೆ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಬಿಎಸ್‌ಪಿ (ಬಹುಜನ ಸಮಾಜವಾದಿ ಪಕ್ಷ) ಅಧ್ಯಕ್ಷೆ ಮಾಯಾವತಿ ಅವರು ಬುಧವಾರ ಆರೋಪಿಸಿದರು.

ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ ‘ಈ ಬಾರಿ ಬಿಜೆಪಿಯ ನಾಟಕ ಮತ್ತು ಮಾತುಗಳು ಕೆಲಸ ಮಾಡುತ್ತಿಲ್ಲ. ಏಕೆಂದರೆ ಬಿಜೆಪಿಯು ತಾನು ಜನರಿಗೆ ನೀಡಿದ ಭರವಸೆಗಳಲ್ಲಿ ನಾಲ್ಕನೇ ಒಂದು ಭಾಗದಷ್ಟೂ ಈಡೇರಿಸಿಲ್ಲ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ. ಜನರು ಬಿಜೆಪಿಯ ಪೊಳ್ಳು ಭರವಸೆಗಳನ್ನು ನೋಡಿದ್ದಾರೆ’ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನಂತೆ ಬಿಜೆಪಿಯೂ ಎಲ್ಲಾ ತನಿಖಾ ಸಂಸ್ಥೆಗಳನ್ನು ರಾಜಕೀಯಗೊಳಿಸಿದೆ ಎಂದು ಈಗ ತೋರುತ್ತಿದೆ. ಸರ್ಕಾರಿ ಉದ್ಯೋಗಗಳಲ್ಲಿ ದಲಿತರು, ಆದಿವಾಸಿಗಳು ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವರ್ಷಗಳವರೆಗೆ ನೀಡಿಲ್ಲ. ಖಾಸಗೀಕರಣ ನೀತಿಯಿಂದಾಗಿ ಕೆಲವೇ ಜನರು ಮೀಸಲಾತಿ ಪ್ರಯೋಜನ ಪಡೆದುಕೊಂಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

Latest Indian news

Popular Stories