ಬಾಕ್ಸರ್‌ ಪರ್ವೀನ್‌ ಅಮಾನತು: ಒಲಿಂಪಿಕ್ಸ್‌ ಕೋಟಾ ಕಳೆದುಕೊಂಡ ಭಾರತ

ನವದೆಹಲಿ: 3 ಬಾರಿ ನಿಯಮ ಉಲ್ಲಂಘನೆ ಮಾಡಿದ ಭಾರತದ ಬಾಕ್ಸರ್‌ ಪರ್ವೀನ್‌ ಹೂಡಾ ಅವರನ್ನು ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ವಾಡಾ) 22 ತಿಂಗಳುಗಳ ಕಾಲ ಅಮಾನತುಗೊಳಿಸಿ ಆದೇಶಿಸಿದೆ. ಇದರೊಂದಿಗೆ ಭಾರತ 57 ಕೆ.ಜಿ. ವಿಭಾಗದಲ್ಲಿ ಒಲಿಂಪಿಕ್ಸ್ ಕೋಟಾ ಕಳೆದುಕೊಂಡಿದೆ.

ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಪರ್ವೀನ್‌, ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್‌ ಕೋಟಾ ಗಿಟ್ಟಿಸಿಕೊಂಡಿದ್ದರು. ಆದರೆ 12 ತಿಂಗಳಲ್ಲಿ 3 ಬಾರಿ ವಾಡಾ ನಿಯಮ ಉಲ್ಲಂಘಿಸಿದ್ದಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ಅಮಾನತು ಅವಧಿ ಈಗಾಗಲೇ 8 ತಿಂಗಳು ಆಗಿರುವುದರಿಂದ ಇನ್ನು 14 ತಿಂಗಳ ಅಮಾನತು ಅವಧಿಯನ್ನು ಪರ್ವೀನ್‌ ಪೂರ್ಣಗೊಳಿಸಬೇಕಿದೆ.

ಇದರೊಂದಿಗೆ ಪರ್ವೀನ್‌ ಸದ್ಯ ಒಲಿಂಪಿಕ್ಸ್‌ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಮೇ 24ರಿಂದ ಬ್ಯಾಂಕಾಕ್‌ನಲ್ಲಿ ಒಲಿಂಪಿಕ್ಸ್ ಅರ್ಹತಾ ಟೂರ್ನಿ ನಡೆಯಲಿದ್ದು, 57 ಕೆ.ಜಿ. ವಿಭಾಗದಲ್ಲಿ ಕೋಟಾ ಗೆಲ್ಲಲು ಭಾರತಕ್ಕೆ ಮತ್ತೊಂದು ಅವಕಾಶವಿದೆ.

ಆದರೆ ಏಪ್ರಿಲ್‌ 11ರ ಮೊದಲು ಹೆಸರು ನೋಂದಾಯಿಸಿದ ಬಾಕ್ಸರ್‌ಗಳಿಗೆ ಮಾತ್ರ ಅರ್ಹತಾ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಹೀಗಾಗಿ 60 ಕೆ.ಜಿ. ಮತ್ತು 66 ಕೆ.ಜಿ. ವಿಭಾಗದಲ್ಲಿ ಭಾರತ ಹೆಸರಿಸಿದ್ದ ಮೀಸಲು ಆಟಗಾರ್ತಿಯರನ್ನೇ 57 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಸಬೇಕಿದೆ.

Latest Indian news

Popular Stories