ನವದೆಹಲಿ: ಮಾರ್ಚ್ 8 ರಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಹಿಂಸಾಚಾರ ಪೀಡಿತ ಮಣಿಪುರದ ಎಲ್ಲಾ ರಸ್ತೆಗಳಲ್ಲಿ ಜನರ ಮುಕ್ತ ಸಂಚಾರ ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಮಣಿಪುರ ಆಡಳಿತ ಮತ್ತು ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರಪತಿ ಆಳ್ವಿಕೆ ಹೇರಿದ ನಂತರ ಮಣಿಪುರದ ಕುರಿತು ನಡೆದ ಮೊದಲ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಗೃಹ ಸಚಿವರು, ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ, ಮೇ 2023 ರಿಂದ ಜನಾಂಗೀಯ ಹಿಂಸಾಚಾರದಿಂದ ಬಳಲುತ್ತಿರುವ ಈಶಾನ್ಯ ರಾಜ್ಯದಲ್ಲಿ ಶಾಂತಿ ಪುನಃಸ್ಥಾಪಿಸುವ ಮಾರ್ಗಗಳು ಮತ್ತು ವಿಧಾನಗಳ ಕುರಿತು ಮುಖ್ಯವಾಗಿ ಚರ್ಚಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಾದಕ ದ್ರವ್ಯ ವ್ಯಾಪಾರ ಜಾಲಗಳನ್ನು ಕಿತ್ತುಹಾಕುವ ಮೂಲಕ ಮಣಿಪುರವನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ(MHA) ಪ್ರಕಟಣೆಯಲ್ಲಿ ತಿಳಿಸಿದೆ.
ಸಭೆಯಲ್ಲಿ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕರು, ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರು, ಪೂರ್ವ ಕಮಾಂಡ್‌ನ ಸೇನಾ ಕಮಾಂಡರ್, ಗಡಿ ಭದ್ರತಾ ಪಡೆ(ಬಿಎಸ್‌ಎಫ್), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಅಸ್ಸಾಂ ರೈಫಲ್ಸ್‌ನ ಮಹಾನಿರ್ದೇಶಕರು, ಮಣಿಪುರದ ಭದ್ರತಾ ಸಲಹೆಗಾರರು ಮತ್ತು ಗೃಹ ಸಚಿವಾಲಯ, ಸೇನೆ ಮತ್ತು ಮಣಿಪುರ ಆಡಳಿತದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.