ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಜ್ಜು: ತಮ್ಮದೇ ‘ತಾಡಾಸನ’ ವೀಡಿಯೊ ಪೋಸ್ಟ್ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈಗಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ. ಅಲ್ಲದೇ ದೇಶದ ಜನರೂ ಈ ನಿಟ್ಟಿನಲ್ಲಿ ಸಜ್ಜಾಗುವಂತೆ ಪ್ರೇರೇಪಿಸುವ ತಮ್ಮದೇ ಗ್ರಾಫಿಕ್ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಜೂನ್ 21ರಂದು ಅಂತಾರಾಷ್ಟ್ಪೀಯ ಯೋಗ ದಿನ. ಹಿಂದಿನ ಸರ್ಕಾರದ ಅವಧಿಯಲ್ಲಿ ಯೋಗಕ್ಕೆ ವಿಶ್ವಮಾನ್ಯತೆ ಲಭ್ಯವಾಗುವಂತೆ ಮಾಡಿಸಿದ ಹುಮ್ಮಸ್ಸಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ಯೋಗ ದಿನಕ್ಕೆ ಈಗಿಂದೀಗಲೇ ತಯಾರಿ ನಡೆಸಿದ್ದಾರೆ. ಎಲ್ಲ ರೀತಿಯ ಯೋಗ ಭಂಗಿಗಳಿಗೆ ದೇಹವನ್ನು ತಯಾರು ಮಾಡಬಲ್ಲ ತಾಡಾಸನ ಹೇಗೆ ಮಾಡುವುದೆಂಬ ವೀಡಿಯೊವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ, ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಇದನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ.

ತಾಡಾಸನ ಅಥವಾ ಪರ್ವತ ಭಂಗಿಯಾಗಿರುವ ಈ ಯೋಗಾಸನದ ಆನಿಮೇಟೆಡ್ ವೀಡಿಯೊದಲ್ಲಿ ಆಸನ ಹೇಗೆ ಮಾಡುವುದೆಂಬುದನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಜತೆಗೆ ಇದರಿಂದಾಗುವ ಪ್ರಯೋಜನಗಳನ್ನೂ ತಿಳಿಯಪಡಿಸಲಾಗಿದೆ.

ಇತ್ತೀಚೆಗೆ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಕಂಪ್ಯೂಟರ್ ಮುಂದೆ ದೀರ್ಘಕಾಲ ಕುಳಿತುಕೊಳ್ಳುವುದು, ಬದಲಾದ ಜೀವನಶೈಲಿಯಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅವುಗಳನ್ನು ಹೋಗಲಾಡಿಸಲು ಯೋಗಾಸನಗಳು ಪರಿಹಾರ ಎನ್ನುತ್ತಾರೆ ತಜ್ಞರು.

ಮೋದಿಯವರು ತಮ್ಮ ಜೀವನದಲ್ಲಿ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅದೇ ರೀತಿ ದೇಶದ ಜನರು ಸಹ ತಮ್ಮ ಜೀವನ ಸುಧಾರಣೆಗೆ ನಿತ್ಯ ಯೋಗ, ಧ್ಯಾನದಲ್ಲಿ ಮಗ್ನರಾಗುವಂತೆ ಸಲಹೆ ನೀಡುತ್ತಾರೆ. 10ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ಶೀಘ್ರದಲ್ಲೇ ಬರಲಿದ್ದು, ಇದಕ್ಕೆ ಪೂರಕವಾಗಿ ಸಜ್ಜಾಗಬೇಕು ಎಂಬ ಕಾರಣಕ್ಕೆ ಎಕ್ಸ್​ ಖಾತೆಯಲ್ಲಿ ಮೋದಿಯವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Latest Indian news

Popular Stories