National

ಅನಾರೋಗ್ಯದ ನಡುವೆಯೂ ರಾಜ್ಯಸಭೆಯ ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡ ಹೆಚ್.ಡಿ.ದೇವೇಗೌಡ

ನವದೆಹಲಿ: ಅನಾರೋಗ್ಯದ ನಡುವೆಯೂ ರಾಜ್ಯಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ಇಡೀ ರಾಷ್ಟ್ರದ ಎಲ್ಲಾ ವರ್ಗಗಳ ಜನರಿಗೆ ಶಕ್ತಿ ತುಂಬುವ ಆಯವ್ಯಯ ಮಂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆ ಸಂದರ್ಭದಲ್ಲಿ ಸದನದಲ್ಲಿಯೇ ಹಾಜರಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು; ಎಲ್ಲರಿಗೂ ಅನುಕೂಲ ಆಗುವಂತಹ, ದೇಶದ ಅಭಿವೃದ್ಧಿಗೆ ದೂರದೃಷ್ಟಿಯ ಕೊಡುಗೆ ನೀಡುವಂತಹ ಬಜೆಟ್ ಮಂಡಿಸಿದ್ದೀರಿ ಎಂದರು.

ಜನರ ಹಿತಾಸಕ್ತಿಯನ್ನು ಕಾಪಾಡಲು ವಿತ್ತ ಸಚಿವರು ತಮ್ಮ ಕೈಲಾದ ಎಲ್ಲವನ್ನೂ ಮಾಡಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದ ಯುವಜನರು ನಗರಗಳಿಗೆ ವಲಸೆ ಬರುವವರ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ದೇವೇಗೌಡರು ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನ ಜನಸಂಖ್ಯೆ ಈಗ 1.4 ಕೋಟಿಗೆ ಮುಟ್ಟಿದೆ. ಎಲ್ಲಾ ಯುವಕರು ತಮ್ಮ ವಿದ್ಯಾಭ್ಯಾಸ ಮುಗಿದ ತಕ್ಷಣ ಹಳ್ಳಿಗಳನ್ನು ತೊರೆದು ನಗರಗಳಿಗೆ ಬಂದು ಸೇರುತ್ತಿದ್ದಾರೆ. ಇದು ಜೀವನೋಪಾಯದ ಸಮತೋಲನವನ್ನು ತಪ್ಪಿಸುತ್ತಿದೆ. ಯುವಕರಿಗೆ ತಮ್ಮ ಪ್ರದೇಶಗಳಿಗಳಲ್ಲಿಯೇ ಹೆಚ್ಚೆಚ್ಚು ಉದ್ಯೋಗವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಮಾಜಿ ಪ್ರಧಾನಿಗಳು ಸಲಹೆ ನೀಡಿದರು.

ಸಮತೋಲಿತ ಜೀವನೋಪಾಯ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು (MSME) ಬೆಂಬಲಿಸಲು ಹೆಚ್ಚು ಸೂಕ್ತವಾದ ಉಪಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಮಾಜಿ ಪ್ರಧಾನಿಗಳು ಒತ್ತಿ ಹೇಳಿದರು

ಹಣಕಾಸು ಬೆಂಬಲ ಪಡೆಯುವಲ್ಲಿ ಅತಿಸಣ್ಣ, ಸಣ್ಣ ಕೈಗಾರಿಕೆಗಳು ಮಧ್ಯಮ ಗಾತ್ರದ ಕೈಗಾರಿಕೆಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಉದ್ದೇಶಕ್ಕಾಗಿ ಪ್ರತ್ಯೇಕ ನೀತಿ, ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯ ತುಂಬಾ ಇದೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಅತಿ ಸಣ್ಣ, ಸಣ್ಣ ಕೈಗಾರಿಕೆಗಳಿಗೆ ಸಾಲದ ಅನುಮೋದನೆ ನೀಡುವಾಗ ಸಿಬಿಲ್ (CIBIL) ಸ್ಕೋರ್‌ ಮಾನದಂಡವನ್ನು ಪರಿಗಣಿಸಬಾರದು. ಬಡ್ಡಿದರಗಳನ್ನು ಶೇ.7ರಿಂದ 8ಕ್ಕೆ ಇಳಿಸಬೇಕು ಮತ್ತು ಆರಂಭಿಕ ಸಾಲ ಮರುಪಾವತಿಗಾಗಿ ಸ್ವತ್ತುಗಳ ಮರುಸ್ವಾಧೀನ ದಂಡ ಪ್ರಯೋಗವನ್ನು ಕೈಬಿಡಬೇಕು ಎಂದು ದೇವೇಗೌಡರು ಸರಕಾರವನ್ನು ಒತ್ತಾಯಿಸಿದರು.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button