National

ನೀವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತೀರಿ, ನಿಮ್ಮನ್ನು ನಾವೂ ಹಾಗೇ ನಡೆಸಿಕೊಳ್ಳುತ್ತೇವೆ: ಭಾರತಕ್ಕೆ Donald Trump ತೆರಿಗೆ ಬೆದರಿಕೆ!

ವಾಷಿಂಗ್ ಟನ್: ಅಮೇರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇನ್ನು ಕೆಲವೇ ದಿನಗಳಲ್ಲಿ ಪದಗ್ರಹಣ ಮಾಡಲಿದ್ದಾರೆ.

ಟ್ರಂಪ್ ಆಡಳಿತಾವಧಿಯಲ್ಲಿ ಭಾರತ- ಅಮೇರಿಕಾ ಸಂಬಂಧಗಳು ಹೇಗಿರಲಿವೆ ಎಂಬ ಬಗ್ಗೆ ನಿರೀಕ್ಷೆಗಳಿವೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಭಾರತ- ಅಮೇರಿಕಾ ಸಂಬಂಧಗಳು ಉತ್ತಮವಾಗಿತ್ತು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೋದಿ ಅವರನ್ನು ಟ್ರಂಪ್ ಕಠಿಣ ವ್ಯವಹಾರಸ್ಥ (Tough negotiator) ಎಂದು ಹೇಳಿದ್ದರು.

ಈಗ ಎರಡನೇ ಅವಧಿಗೆ ಸಜ್ಜಾಗುತ್ತಿರುವ ಟ್ರಂಪ್, ದಿಢೀರ್ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಭಾರತದ ವಿರುದ್ಧ ಅತಿ ಹೆಚ್ಚು ತೆರಿಗೆ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

ಅಮೇರಿಕಾದ ಕೆಲವು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಭಾರತ ಅತಿ ಹೆಚ್ಚು ತೆರಿಗೆ ವಿಧಿಸುತ್ತಿರುವುದನ್ನು ಟ್ರಂಪ್ ವಿರೋಧಿಸಿದ್ದಾರೆ. ಈ ಹಿಂದೆಯೂ ಟ್ರಂಪ್ ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ಇನ್ನಷ್ಟು ತೀಕ್ಷ್ಣವಾಗಿ ಈ ಬಗ್ಗೆ ಮಾತನಾಡಿದ್ದಾರೆ.

ಮುಯ್ಯಿಗೆ ಮುಯ್ಯಿ ಎಂಬ ಭಾಷೆಯಲ್ಲೇ ಮಾತನಾಡಿರುವ ಟ್ರಂಪ್, ಅವರು ನಮ್ಮ ಉತ್ಪನ್ನಗಳ ಆಮದಿಗೆ ಹೆಚ್ಚು ತೆರಿಗೆ ವಿಧಿಸಿದರೆ, ನಾವೂ ಅಷ್ಟೇ ಪ್ರಮಾಣದ ತೆರಿಗೆ ವಿಧಿಸುತ್ತೇವೆ, ನಾವೂ ತೆರಿಗೆ ವಿಧಿಸೋಣ ಅವರೂ ವಿಧಿಸಲಿ, ಬಹುತೇಕ ಎಲ್ಲದಕ್ಕೂ ಅವರು ನಮಗೆ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದಾರೆ, ಆದರೆ ನಾವು ಮಾತ್ರ ಅವರಿಗೆ ತೆರಿಗೆ ವಿಧಿಸುತ್ತಿಲ್ಲ ಎಂದು ವರದಿಗಾರರೊಂದಿಗೆ ಮಾತನಾಡಿರುವ ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ. ಚೀನಾ ಜೊತೆ ವ್ಯಾಪಾರ ಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಿದ್ದ ಟ್ರಂಪ್, ಕೆಲವು ಯುಎಸ್ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುವ ದೇಶಗಳಲ್ಲಿ ಭಾರತ ಮತ್ತು ಬ್ರೆಜಿಲ್ ಸೇರಿವೆ ಎಂದು ಹೇಳಿದ್ದಾರೆ.

“ಪರಸ್ಪರ” ಎಂಬ ಪದ ಮುಖ್ಯವಾಗಿದೆ. ಭಾರತ ನಮಗೆ 100 ಪ್ರತಿಶತದಷ್ಟು ಶುಲ್ಕ ವಿಧಿಸಿದರೆ, ನಾವು ಅವರಿಗೆ ಏನನ್ನೂ ವಿಧಿಸುವುದಿಲ್ಲವೇ? ಅವರು ನಮಗೆ 100 ಮತ್ತು 200 ಶುಲ್ಕ ವಿಧಿಸುತ್ತಾರೆ. ಭಾರತವು ಬಹಳಷ್ಟು ಶುಲ್ಕ ವಿಧಿಸುತ್ತದೆ. ಬ್ರೆಜಿಲ್ ನಮಗೆ ಹೆಚ್ಚು ಶುಲ್ಕ ವಿಧಿಸುತ್ತದೆ. ಅವರು ಹೆಚ್ಚು ಶುಲ್ಕ ವಿಧಿಸಲು ಬಯಸಿದರೆ, ಅದು ಉತ್ತಮವಾಗಿದೆ. ಹಾಗೆಯೇ ನಾವೂ ಅವರಿಗೆ ಅದೇ ಶುಲ್ಕ ವಿಧಿಸುತ್ತೇವೆ” ಎಂದು ಮಾರ್-ಎ-ಲಾಗೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರ ವಾಣಿಜ್ಯ ಕಾರ್ಯದರ್ಶಿ ಪಿಕ್ ಹೋವರ್ಡ್ ಲುಟ್ನಿಕ್, ಪರಸ್ಪರ ಸಂಬಂಧವು ಟ್ರಂಪ್ ಆಡಳಿತಕ್ಕೆ ಪ್ರಮುಖ ವಿಷಯವಾಗಿದೆ ಎಂದು ಹೇಳಿದರು.

“ನೀವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತೀರಿ, ನಿಮ್ಮನ್ನೂ ನಾವು ಹಾಗೆಯೇ ನಡೆಸಿಕೊಳ್ಳುತ್ತೇವೆ ಎಂಬುದನ್ನು ನೀವು ನಿರೀಕ್ಷಿಸಬೇಕು” ಎಂದು ಅವರು ಹೇಳಿದರು.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button