ಕೇರಳ | ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆಯಾಗಿ 8 ವಿದ್ಯಾರ್ಥಿಗಳು ಅಸ್ವಸ್ಥ

ಕಣ್ಣೂರು (ಕೇರಳ): ಟ್ಯಾಂಕರ್‌ ಲಾರಿಯಿಂದ ಗ್ಯಾಸ್‌ ಸೋರಿಕೆಯಾದ ಪರಿಣಾಮ ನರ್ಸಿಂಗ್‌ ಕಾಲೇಜಿನ ಎಂಟು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಣ್ಣೂರು ಜಿಲ್ಲೆಯ ರಾಮಪುರಂನಲ್ಲಿ ನಡೆದಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಮತ್ತು ಪಳಯಾಂಗಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ನೆರೆಯ ಕರ್ನಾಟಕದಿಂದ ಎರ್ನಾಕುಲಂಗೆ ತೆರಳುತ್ತಿದ್ದಾಗ ಟ್ಯಾಂಕರ್‌ ಲಾರಿಯಿಂದ ಹೈಡ್ರೋಕ್ಲೋರಿಕ್‌ ಆಯಸಿಡ್‌ ಸೋರಿಕೆಯಾಗಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಅಗತ್ಯ ಕ್ರಮಗಳನ್ನು ಕೈಗೊಂಡರು ಸಹ ಸೋರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ಟ್ಯಾಂಕರ್‌ ಲಾರಿಯನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಗ್ಯಾಸ್‌ ಅನ್ನು ಮತ್ತೊಂದು ಟ್ಯಾಂಕರ್‌ಗೆ ವರ್ಗಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಳಿಪರಂಬ ಕಂದಾಯ ವಿಭಾಗಾಧಿಕಾರಿ (ಆರ್‌ಡಿಒ) ಅಜಯ್‌ಕುಮಾರ್‌ ತಿಳಿಸಿದ್ದಾರೆ

Latest Indian news

Popular Stories