ಹೈದರಾಬಾದ್‌ನಲ್ಲಿ ಐಷಾರಾಮಿ ಬಂಗಲೆ ಮಾರಾಟದಲ್ಲಿ ಹೆಚ್ಚಳ

ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ರೋಗವು ಆರ್ಥಿಕ ಕ್ಷೇತ್ರದ ಮೇಲೆ ಗಂಭೀರ ಪ್ರಭಾವ ಬೀರಿದೆ. ಆದರೆ, ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಅಷ್ಟೇನೂ ಪರಿಣಾಮ ಬೀರಿದಂತೆ ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿಯೇ ನಗರದಲ್ಲಿ ಐಷಾರಾಮಿ ಮನೆಗಳ ಮಾರಾಟದಲ್ಲಿ ಹೆಚ್ಚಳ ದಾಖಲಾಗಿದೆ.
2021 ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ, ಅಂದರೆ ಏಪ್ರಿಲ್-ಜೂನ್ ಅಧಿಯಲ್ಲಿ ನಗರದಲ್ಲಿ 429 ಐಷಾರಾಮಿ ಮನೆಗಳನ್ನು ಮಾರಾಟ ಮಾಡಲಾಗಿದೆ. ವಾರ್ಷಿಕ ಬೇಡಿಕೆಯಲ್ಲಿ ಶೇಕಡಾ 121 ರಷ್ಟು ಹೆಚ್ಚಳ ದಾಖಲಾಗಿದೆ. ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಹೊಸ ವಸತಿ ಯೋಜನೆಗಳನ್ನು, ಅತೀ ಹೆಚ್ಚು ಮಾರಾಟವನ್ನು ಮತ್ತು ಲಾಭದಲ್ಲಿ ಹೆಚ್ಚಳ ದಾಖಲಿಸಿದ ಭಾರತದ ಏಕೈಕ ನಗರ ಹೈದರಾಬಾದ್ ಎನ್ನುವುದು ವಿಶೇಷ ಸಂಗತಿ. ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಕೋವಿಡ್ ಅಷ್ಟೇನು ಪರಿಣಾಮ ಬೀರಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಪ್ರಾಪ್ ಟೈಗರ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಪ್ರಕಾರ, ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮನೆಗಳ ಮಾರಾಟದಲ್ಲಿ ಶೇಕಡಾ 5 ರಷ್ಟು ಹೆಚ್ಚಳವಾಗಿದೆ. ಹೊಸದಾಗಿ ನಿರ್ಮಿಸಲಾದ ಕಟ್ಟಡಗಳ ಚದರ ಅಡಿಗಳ ಮೌಲ್ಯವೂ ಹೆಚ್ಚಾಗಿದೆ. ಪ್ರಾಪ್ ಟೈಗರ್ ಡಾಟ್ ಕಾಮ್‌ನ ಗ್ರೂಪ್ ಸಿಇಒ ಮಣಿ ರಂಗರಾಜನ್ ಅವರ ಪ್ರಕಾರ, ಹೈದರಾಬಾದ್ ನಗರವು ಬೆಂಗಳೂರಿಗೆ ಸಮನಾಗಿ ದೇಶದಲ್ಲಿ ಉತ್ತಮ ವಾಣಿಜ್ಯ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಮತ್ತು ದೆಹಲಿಯ ಎನ್‌ಸಿಆರ್ ಮಾರುಕಟ್ಟೆಗಿಂತ ಮುಂದಿದೆ. ನಗರದ ಆರ್ಥಿಕ ಪ್ರಗತಿಯಲ್ಲಿ ಐಟಿ ಮತ್ತು ಫಾರ್ಮಾ ಕ್ಷೇತ್ರಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳುತ್ತಾರೆ. ನಗರದ ನಿವಾಸಿಗಳಲ್ಲಿ ಐಷಾರಾಮಿ ಮನೆಗಳ ಬಗ್ಗೆ ಹೆಚ್ಚಿನ ಒಲವು ಇದೆ ಎಂದೂ ಅವರು ಹೇಳುತ್ತಾರೆ.
ನಗರ ನಿವಾಸಿಗಳ ಜೀವನದ ಗುಣಮಟ್ಟ ಸುಧಾರಿಸಿದೆ. ಬದಲಾದ ಈ ಪರಿಸ್ಥಿತಿಯಿಂದಾಗಿ ವಸತಿ ಮಾರುಕಟ್ಟೆಯು ಸುಧಾರಿಸಿದೆ. ಅಧಿಕ ಸೌಲಭ್ಯ ಇರುವ ಐಷಾರಾಮಿ ಮನೆಗಳನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚುತ್ತಿದೆ. ಇವೆಲ್ಲವುಗಳ ಪರಿಣಾಮವಾಗಿ ರಿಯಲ್ ಎಸ್ಟೆಟ್ ಕ್ಷೇತ್ರದ ಬೆಳವಣಿಗೆಯಲ್ಲಿ ಏರಿಕೆ ದಾಖಲಾಗಿದೆ ಎನ್ನುತ್ತಾರೆ, ರಂಗರಾಜನ್.
ರಿಯಲ್ ಎಸ್ಟೆಟ್ ಕ್ಷೇತ್ರವನ್ನು ಉದ್ಯಮಿಗಳು ಇಷ್ಟಪಡುತ್ತಾರೆ. ಅದು ಆದ್ಯತೆಯ ಕ್ಷೇತ್ರವೂ ಆಗಿದೆ. ವಸತಿ ಯೋಜನೆಗಳ ಅಡಿಯಲ್ಲಿ ನಗರದಲ್ಲಿ ಒಟ್ಟು 8,811 ಹೊಸ ಮನೆಗಳ ನಿರ್ಮಾಣ ಶುರುವಾಗಿದೆ. ಇದು ವಾರ್ಷಿಕ ಸರಾಸರಿಗೆ ಹೋಲಿಸಿದ್ದಲ್ಲಿ ಶೇ. 16 ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳುತ್ತಾರೆ. ಹೊಸ ವಸತಿ ಯೋಜನೆಗಳಲ್ಲಿನ ಮನೆಗಳ ಬೆಲೆಯೂ ಹೆಚ್ಚಿದೆ. ಗಮನಿಸಬೇಕಾದ ಸಂಗತಿ ಎಂದರೆ, ಹೊಸ ವಸತಿ ಯೋಜನೆಗಳಲ್ಲಿರುವ ಮನೆಗಳ ಪೈಕಿ ಶೇ. 51 ರಷ್ಟು ಮನೆಗಳ ಬೆಲೆಯು ರೂ. 75 ಲಕ್ಷಕ್ಕಿಂತ ಹೆಚ್ಚಾಗಿರುವುದು. ಜನರಲ್ಲಿ ಕೊಳ್ಳುವ ಸಾಮರ್ಥ್ಯ ಹೆಚ್ಚಿರುವುದಕ್ಕೂ ಇದು ಸಾಕ್ಷಿಯಾಗಿದೆ. ಹಾಗೆಯೇ ಐಷಾರಾಮಿ ಬಂಗಲೆಗಳನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಿರುವುದರ ಸಂಕೇತವೂ ಆಗಿದೆ.
ಹೈದರಾಬಾದ್‌ನಲ್ಲಿ ಒಂದು ಐಷಾರಾಮಿ ಮನೆಯ ಸರಾಸರಿ ಚದರ ಅಡಿ ಬೆಲೆ ರೂ. 5790 ರಷ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದ್ದಲ್ಲಿ ಶೇ. 5 ರಷ್ಟು ಹೆಚ್ಚಳ ದಾಖಲಾಗಿದೆ. ದೇಶದ ಇತರ ಯಾವುದೇ ನಗರದಲ್ಲಿ ಈ ರೀತಿಯ ಹೆಚ್ಚಳ ದಾಖಲಾಗಿಲ್ಲ ಎನ್ನುವುದು ವಿಶೇಷ.

Latest Indian news

Popular Stories