ಉತ್ತರಾಖಂಡಕ್ಕೆ ಹೊಸ ಮುಖ್ಯಮಂತ್ರಿ !

ಡೆಹ್ರಾಡೂನ್ : ಉತ್ತರಾಖಂಡದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಖಾತಿಮ ಕ್ಷೇತ್ರದ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ನೇಮಿಸಲಾಗಿದೆ. ಶುಕ್ರವಾರ ತೀರಥ್ ಸಿಂಗ್ ರಾವತ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಶನಿವಾರ ನಡೆದ ರಾಜ್ಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಿತ್ತೋರಗಡ ಮೂಲದ ೪೫ ವರ್ಷದ ಪುಷ್ಕರ್ ಸಿಂಗ್ ಧಾಮಿ ಅವರು ನಾಲ್ಕು ತಿಂಗಳಲ್ಲಿ ಸಿಎಂ ಹುದ್ದೆಗೆ ಏರುತ್ತಿರುವ ಮೂರನೇ ವ್ಯಕ್ತಿಯಾಗಲಿದ್ದಾರೆ. ಉತ್ತರಾಖಂಡ ಬಿಜೆಪಿ ಸರ್ಕಾರದ ಸಿಎಂ ಆಗಿದ್ದ ತ್ರಿವೇಂದ್ರ ಸಿಂಗ್ ರಾವತ್ ಅವರ ಸ್ಥಾನಕ್ಕೆ ಮಾರ್ಚ್ ೧೦ ರಂದು ತೀರಥ್ ಸಿಂಗ್ ರಾವತ್ ಅವರನ್ನು ನೇಮಿಸಲಾಗಿತ್ತು. ತೀರಥ್ ಸಿಂಗ್ ನಿನ್ನೆ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರಿಗೆ ರಾಜೀನಾಮೆ ನೀಡಿದರು.
ತೀರಥ್ ಸಿಂಗ್ ರಾವತ್ ಅವರು ಸಂಸದರಾಗಿದ್ದು, ಸಿಎಂ ಆದ ನಂತರ, ಶಾಸಕರಾಗಿ ಆಯ್ಕೆ ಆಗಲು ಸೆಪ್ಟೆಂಬರ್ ೧೦ ರವರೆಗೆ ಸಮಯವಿತ್ತು. ಕರೊನಾ ಹಿನ್ನೆಲೆಯಲ್ಲಿ ಯಾವುದೇ ಉಪಚುನಾವಣೆ ನಡೆಸಲಾಗದ ಕಾರಣಕ್ಕೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಹುದು ಎನ್ನಲಾಗಿತ್ತು. ರಾಜ್ಯದ ವಿಧಾನಸಭಾ ಚುನಾವಣೆಗಳು ಮುಂದಿನ ವರ್ಷ ನಡೆಯಲಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುಷ್ಕರ್ ಸಿಂಗ್ ಧಾಮಿ ಅವರು, `ನನ್ನ ಪಕ್ಷವು ಒಬ್ಬ ಸಾಮಾನ್ಯ ಕಾರ್ಯಕರ್ತನಾದ, ಮಾಜಿ ಸೈನಿಕನ ಮಗನಾದ ನನ್ನನ್ನು ರಾಜ್ಯದ ಸೇವೆ ಮಾಡಲು ನೇಮಿಸಿದೆ. ನಾವು ಜನರ ಕಲ್ಯಾಣಕ್ಕಾಗಿ ಒಟ್ಟಿಗೆ ಕೆಲಸ ಮಾಡುತ್ತೇವೆ. ಈ ಕಡಿಮೆ ಅವಧಿಯಲ್ಲಿ ಜನಸೇವೆ ಮಾಡುವ ಸವಾಲನ್ನು, ಇತರರ ಸಹಾಯದೊಂದಿಗೆ, ಸ್ವೀಕರಿಸುತ್ತೇನೆ’ ಎಂದಿದ್ದಾರೆ.

Latest Indian news

Popular Stories

error: Content is protected !!